ವಿಜಯಸಾಕ್ಷಿ ಸುದ್ದಿ, ರೋಣ: ಓದು-ಬರಹ ಗೊತ್ತಿದ್ದರೂ ಸಹ ಬ್ಯಾಂಕ್‌ನಲ್ಲಿ ಹೋದಾಗ ಅಲ್ಲಿ ಹಣ ತುಂಬುವ, ತೆಗೆಯುವ ಚಲನ್ ಭರ್ತಿ ಮಾಡುವಂತೆ ಗೋಗೆರೆಯುವ ಕೆಲವರನ್ನು ಕಾಣುತ್ತೇವೆ. ಆದರೆ ಈ ಶಾಲೆಯ ಮಕ್ಕಳಿಗೆ ಅದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶಾಲೆ ಕಲಿಯುವಾಗಲೇ ನೀಡುತಿದ್ದಾರೆ. ಜೊತೆಗೆ ಶಾಲೆಯ ಮಕ್ಕಳೇ ಬ್ಯಾಂಕ್ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರೆ ಹೊಸ ವಿಷಯವಲ್ಲವೇ? ಅದುವೇ SBGP. ಇದು ಮಕ್ಕಳೇ ನಿರ್ವಹಿಸುವ ಮಾದರಿ ಸ್ಕೂಲ್ ಬ್ಯಾಂಕ್!
ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ ಅವರು ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ SBGPಗೆ ಹೊಳೆ ಮಣ್ಣೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಉಳಿತಾಯದ ಮನೋಭಾವ ಬೆಳೆಸುವುದು ಹಾಗೂ ಬ್ಯಾಂಕಿಂಗ್/ಹಣಕಾಸಿನ ವಿಷಯದ ಕುರಿತು ಜಾಗೃತಿ ಮೂಡಿಸುವುದು ಇತ್ಯಾದಿ ಮಹತ್ತರ ಉದ್ದೇಶಗಳೊಂದಿಗೆ ಗ್ರಾಮ ಪಂಚಾಯಿತಿಯು ವಿದ್ಯಾರ್ಥಿಗಳಿಗಾಗಿ ಬ್ಯಾಂಕ್ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಳೆಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರಕಾರಿ ಪ್ರೌಢಶಾಲೆ ಹಾಗೂ ಎರಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು ಮೂರು ಶಾಲೆಗಳಲ್ಲಿ 458 ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಪಾಸ್‌ಬುಕ್ ವಿತರಿಸುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿಯಿಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು SBGP ಯಲ್ಲಿ ತಮ್ಮ ಖಾತೆ ತೆರೆದಿದ್ದು, ಬ್ಯಾಂಕ್ ಪಾಸ್‌ಬುಕ್ ವಿತರಿಸಲಾಗಿದೆ. ಪ್ರತಿಯೊಬ್ಬ ವಿಧ್ಯಾರ್ಥಿಯ ಖಾತೆದಾರರಿಗೂ ಒಂದು ಪಾಸ್‌ಬುಕ್ ನೀಡಲಾಗುತ್ತದೆ ಹಾಗೂ ಅವರ ಬಳಿಯೇ ಇರುತ್ತದೆ. ಆ ಪಾಸಬುಕ್ ಮೂಲಕವೇ ವ್ಯವಹಾರ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಬೇಕಾದಾಗ ಹಣ ತೆಗೆದುಕೊಳ್ಳಬಹುದು, ಹಾಗೂ ಜಮಾ ಮಾಡಬಹುದು.
ಏನಿದು ಸ್ಕೂಲ್ ಬ್ಯಾಂಕ್ ಆಫ್ ಜಿಪಿ, ಎನಿದರ ವಿಶೇಷ
ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ (SBGP) ಇದು ಹೊಳೆಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಮಾತ್ರ ತೆರೆದ ಬ್ಯಾಂಕ್ ಆಗಿರುತ್ತದೆ. ಪ್ರತಿ ಶನಿವಾರ 9ರಿಂದ 10 ಗಂಟೆಗೆ ಬ್ಯಾಂಕ್ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತದೆ. ಪ್ರತಿ ಶಾಲೆಯ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಮತ್ತು ಹಣಕಾಸು ಮಂತ್ರಿಗಳನ್ನು ಬ್ಯಾಂಕರ್ ಹಾಗೂ ಕ್ಯಾಷಿಯರ್ ಆಗಿ ನಿಯಮಿಸಿ ಬ್ಯಾಂಕ್ ವಹಿವಾಟಿನ ತರಬೇತಿ ನೀಡಿ ವಿದ್ಯಾರ್ಥಿಗಳಿಗೆ SBGP ಬ್ಯಾಂಕಿನ ಜವಾಬ್ದಾರಿ ವಹಿಸಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಾತ ಮಠಪತಿ, ಗ್ರಾಮ ಪಂಚಾಯಿತಿ ಸದಸ್ಯರು, ಮುಖ್ಯೋಪಾಧ್ಯಾಯರು, ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಸಕ್ತ ಖಾತೆದಾರ ವಿದ್ಯಾರ್ಥಿಗಳು ಕನಿಷ್ಠ ಎರಡು ರೂಪಾಯಿಯಿಂದ ಗರಿಷ್ಠ 20 ರೂಪಾಯಿಯವರೆಗೆ ಉಳಿತಾಯ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ಖಾತೆಯಲ್ಲಿ ಜಮೆ ಇರುವ ಮೊತ್ತವನ್ನು ಪಡೆಯಬಹುದು. ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಪಾಸ್ ಪುಸ್ತಕ ಒದಗಿಸಲಾಗಿದೆ. ವಾರ್ಷಿಕವಾಗಿ ಅತಿ ಹೆಚ್ಚು ಸಲ ವ್ಯವಹರಿಸಿದ/ ಹೆಚ್ಚು ಉಳಿತಾಯ ಮಾಡಿದ ಖಾತೆದಾರರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.