ಶಿವಮೊಗ್ಗ:– ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತಿಯೋರ್ವ, ಪತ್ನಿಯ ಸ್ನೇಹಿತೆ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.
ಗಂಡ ಹೆಂಡತಿಯರ ಜಗಳದಲ್ಲಿ ಹಲ್ಲೆಗೊಳಗಾಗಿದ್ದ ಸ್ನೇಹಿತೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನನ್ನ ಹೆಂಡತಿಯನ್ನು ಯಾಕೆ ಆಸ್ಪತ್ರೆಗೆ ದಾಖಲಿಸಿದೆ ಎಂದು ಪತ್ನಿಯ ಸ್ನೇಹಿತೆ ಮೇಲೆ ಗಂಡ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಸದ್ಯ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ.
ಲಲಿತಮ್ಮ ಮತ್ತು ಪ್ರಕಾಶ್ ದಂಪತಿ ಮದುವೆಯಾಗಿ 12 ವರ್ಷ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ ಪತಿ ಕುಡಿದು ಪದೇ ಪದೇ ಗಲಾಟೆ ಮಾಡಿ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಲಲಿತಮ್ಮಳನ್ನು ಸ್ನೇಹಿತೆ ಆಶಾ, ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.
ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ ಪತಿಯು ಪತ್ನಿಯನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಪತ್ನಿ ಆರೋಗ್ಯ ವಿಚಾರಿಸುವುದನ್ನು ಬಿಟ್ಟು ಈ ಘಟನೆಗೆ ಪತ್ನಿಯ ಸ್ನೇಹಿತೆ ಆಶಾಳೇ ಕಾರಣವೆಂದು ಹತ್ತಾರು ಜನರ ಮುಂದೆ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪತ್ನಿಯ ಸ್ನೇಹಿತೆಯನ್ನು ಥಳಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.