ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮೀಪದ ಸಂಭಾಪೂರ ಕ್ರಾಸ್ನಲ್ಲಿರುವ ದಾವಲ್ ಮಲಿಕ್ ದರ್ಗಾದ 25ನೇ ವರ್ಷದ ಉರುಸ್ ಅಂಗವಾಗಿ ಸಂದಲ್(ಗಂಧ) ಮೆರವಣಿಗೆ ಹಿಂದೂ-ಮುಸ್ಲಿಂ ಭಾಂದವರ ಪಾಲ್ಗೊಳ್ಳುವಿಕೆಯಲ್ಲಿ ಸಂಭ್ರಮದಿಂದ ಜರುಗಿತು.
ಇಲ್ಲಿಯ ಅಂಬೇಡ್ಕರ ನಗರದಲ್ಲಿರುವ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಅವರ ಮನೆಯಲ್ಲಿ ವಿಧಿ ವಿಧಾನಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಗಂಧ ಮೆರವಣಿಗೆಯು ಆರಂಭವಾಯಿತು. ಕೆ.ಎಸ್. ಪೂಜಾರ ಪುತ್ರ ಆಕಾಶ ಕೆಂಚಪ್ಪ ಪೂಜಾರ ಗಂಧವನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ಹಿಂದೂ ಮುಸ್ಲಿಂ ಭಾಂದವರ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಮೆರವಣಿಗೆಯಲ್ಲಿ ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಪೀರಸಾಬ ನದಾಫ್, ಬಸವರಾಜ ಯಲಿಶಿರುಂಜ, ಮಹಾಂತೇಶ ಕಮತರ, ಲಕ್ಷ್ಮಣ ಗುಡಸಲಮನಿ ಸೇರಿದಂತೆ ಗ್ರಾಮದ ಹಿಂದೂ-ಮುಸ್ಲಿಂ ಗಣ್ಯರು, ಯುವಕರು ಪಾಲ್ಗೊಂಡಿದ್ದರು.
ಗ್ರಾಮದ ಅತ್ತಿಮಬ್ಬೆ ಮಹಾದ್ವಾರ ಮೂಲಕ ಬಜಾರ ರಸ್ತೆಯಿಂದ ಹಿರೆಮಸೂತಿಯ ರಸ್ತೆಯ ಮೂಲಕ ಮೆರವಣಿಗೆ ಸಂಚರಿಸಿ ಸಂಭಾಪೂರ ಕ್ರಾಸ್ನಲ್ಲಿ ದಾವಲ್ ಮಲಿಕ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಗಂಧವನ್ನು ಗದ್ದುಗೆಗೆ ತಲುಪಿಸಲಾಯಿತು. ದಾರಿಯುದ್ದಕ್ಕೂ ಪುಟ್ಟರಾಜ ಮೆಲೋಡಿಸ್ ಅವರಿಂದ ನಡೆದ ರಸಮಂಜರಿ ಕಾರ್ಯಕ್ರಮ ಮನರಂಜಿಸಿತು.