ಮ್ಯಾಡ್ರಿಡ್:- ನಟ ಅಜಿತ್ ಕುಮಾರ್ ಇತ್ತೀಚೆಗಷ್ಟೇ ದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಇದೀಗ ಮತ್ತೆ ಸ್ಪೇನ್‌ನಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಸದ್ಯ ನಟ ಸುರಕ್ಷಿತವಾಗಿದ್ದಾರೆ.
ಸ್ಪೇನ್‌ನಲ್ಲಿ ನಡೆದ ರೇಸ್‌ನಲ್ಲಿ ಭಾಗವಹಿಸಿದ ವೇಳೆ, ಅಜಿತ್ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿದೆ. ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ವ್ಯವಸ್ಥಾಪಕ ಸುರೇಶ್ ಚಂದ್ರ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು ಅವರ ಸುರಕ್ಷತೆಯ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರೇಸ್‌ನ 5ನೇ ಸುತ್ತಿನಲ್ಲಿ ಅಜಿತ್ ಕುಮಾರ್ ಅವರು 14 ನೇ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಯನ್ನು ಗಳಿಸಿದರು. 6 ನೇ ಸುತ್ತಿನಲ್ಲಿ ಎರಡು ಬಾರಿ ಕಾರು ಅಪಘಾತಕ್ಕೀಡಾಯಿತು. ಮೊದಲ ಬಾರಿಗೆ ಅಪಘಾತದ ಹೊರತಾಗಿಯೂ ಅವರು ಚೆನ್ನಾಗಿಯೇ ಇದ್ದರು. ಎರಡನೇ ಬಾರಿ ಮತ್ತೆ ಅಪಘಾತ ಸಂಭವಿಸಿದಾಗ ಅವರ ಕಾರು ಪಲ್ಟಿಯಾಯಿತು. ಬಳಿಕ ಮತ್ತೆ ಅವರು ರೇಸ್ ಮುಂದುವರಿಸಿದರು.
ಅಪಘಾತದಲ್ಲಿ ಅಜಿತ್ ಅವರದ್ದೇನೂ ತಪ್ಪಿಲ್ಲವೆಂಬ ಅಂಶ ಅಪಘಾತದ ಸಮಯದ ವಿಡಿಯೋದಿಂದ ತಿಳಿದು ಬಂದಿದೆ. ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ನಟ ಅಲ್ಲಿದ್ದ ತಮ್ಮ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.
ಇನ್ನೂ ಅಜಿತ್ ಅವರ ರೇಸಿಂಗ್ ವೃತ್ತಿಜೀವನದಲ್ಲಿ ಒಂದೇ ತಿಂಗಳಿನಲ್ಲಿ ನಡೆದ ಎರಡನೇ ಪ್ರಮುಖ ಅಪಘಾತ ಇದಾಗಿದೆ.