ಪಟ್ಟಣ ಸಹಕಾರ ಬ್ಯಾಂಕುಗಳು ಅಗ್ರಸ್ಥಾನದಲ್ಲಿವೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವು ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.

Advertisement

ಕಾರ್ಯಕ್ರಮವನ್ನು ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್‌ನ ಅಧ್ಯಕ್ಷ ಮೋಹನ ಟಿ.ಕೋಟಿ ಉದ್ಘಾಟಿಸಿ ಮಾತನಾಡುತ್ತಾ, ಕರ್ನಾಟಕದ ಸಹಕಾರವು ಚಳವಳಿಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದ್ದು, ಅಂದಾಜು 47 ಸಾವಿರ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರ ಚಳುವಳಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸಂಸ್ಥೆಗಳಲ್ಲಿ ಇಂದು ಪಟ್ಟಣ ಸಹಕಾರ ಬ್ಯಾಂಕುಗಳು ಅಗ್ರಸ್ಥಾನದಲ್ಲಿವೆ. ಪಟ್ಟಣ ಸಹಕಾರ ಬ್ಯಾಂಕುಗಳ ವಲಯ ಪಟ್ಟಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು, ಪಟ್ಟಣ ಪ್ರದೇಶದ ಜನರಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿ ಪೋಷಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ಚಟ್ಟಿ ಮಾತನಾಡುತ್ತಾ, ವಾಣಿಜ್ಯ ಬ್ಯಾಂಕುಗಳಿಗೆ ಹೊಲಿಸಿದರೆ ಪಟ್ಟಣ ಸಹಕಾರ ಬ್ಯಾಂಕುಗಳು ಗಾತ್ರದಲ್ಲಿ ಬಹಳ ಚಿಕ್ಕವು. ವಾಣಿಜ್ಯ ಬ್ಯಾಂಕುಗಳ ಮೇಲೆ ಇರುವಷ್ಟು ನಂಬಿಕೆ ಪಟ್ಟಣ ಸಹಕಾರ ಬ್ಯಾಂಕುಗಳ ಮೇಲೆ ಇರುವುದಿಲ್ಲ. ಅದರಲ್ಲೂ ಸಣ್ಣ ಗಾತ್ರದ ಬ್ಯಾಂಕುಗಳಲ್ಲಿ ಠೇವಣಿ ಹೂಡುವಾಗ ಕೊಡುವ ಬಡ್ಡಿದರ, ನಂಬಿಕೆ ಹೆಚ್ಚು ಕೆಲಸ ಮಾಡುತ್ತದೆ. ನಂಬಿಕೆಯ ಅಸ್ಥಿತ್ವವನ್ನೇ ಅಲ್ಲಾಡಿಸುವ ಘಟನೆಗಳು ನಡೆದಾಗ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕುಗಳ ಮೇಲೆ ಅದರ ಋಣಾತ್ಮಕ ಪರಿಣಾಮ ಆಗುತ್ತದೆ ಎಂದರು.

ಮರ್ಚಂಟ್ಸ್ ಲಿಬರಲ್ ಬ್ಯಾಂಕಿನ ಉಪಾಧ್ಯಕ್ಷ ಕೆ.ಎಸ್. ಪರ್ವತಗೌಡ್ರ, ನಿರ್ದೇಶಕರಾದ ಚಂದ್ರಕಾಂತ ಎಸ್.ಸಂಕಣ್ಣವರ, ಸಂತೋಷ ಅಬ್ಬಿಗೇರಿ, ಸಿ.ಟಿ. ದುಂದೂರ, ಪ್ರಧಾನ ವ್ಯವಸ್ಥಾಪಕ ರಾಜು ಎಲ್.ಕೋಟಿ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕಪರಿಶೋಧಕರಾದ ಜ್ಯೋತಿ ಎನ್.ಮಾಳೆಕೊಪ್ಪ ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಬಿ.ವ್ಹಿ. ರವಿಂದ್ರನಾಥ, ವರುಣ ಭಟ್ಟ, ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು. ವಿದ್ಯಾ ಹುಬ್ಬಳ್ಳಿ ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ ಮಾತನಾಡಿ, ಜನತೆಗೆ ಬ್ಯಾಂಕುಗಳಿಗೆ ವಿಧಿಸುವ ಆದಾಯ ತೆರಿಗೆಯೂ ಸಹ ಬ್ಯಾಂಕಿನ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದು, ಈ ಕುರಿತು ಸಹಕಾರಿಗಳು ಹಾಗೂ ಸರ್ಕಾರ ಚಿಂತನ-ಮಂಥನ ನಡೆಸಬೇಕಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here