ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ದುರ್ಗಾ ವೃತ್ತದಲ್ಲಿ ಅಳವಡಿಸಿರುವ ಥರ್ಡ್ ಐ ಕ್ಯಾಮೆರಾ ಕಡೆಗೆ ವಾಹನ ಸವಾರರ ಗಮನವೇ ಇಲ್ಲದಂತಾಗಿದೆ. ಹೀಗಾಗಿ ನಿತ್ಯವೂ 25-30 ಪ್ರಕರಣಗಳು ದಾಖಲಾಗುತ್ತಿದ್ದು, ತಿಂಗಳಿಗೆ ಏನಿಲ್ಲವೆಂದರೂ ಅಂದಾಜು 1000 ಪ್ರಕರಣಗಳು ದಾಖಲಾಗಿ ವಾಹನ ಸವಾರರು ದಂಡ ಕಟ್ಟುತ್ತಿದ್ದಾರೆ ಎಂದು ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಅವರು, ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು ಹೀಗೆ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಕಟ್ಟುವುದು ನಡೆದೇ ಇದೆ. ವಾಹನ ಸವಾರರು ಇದರ ಕಡೆಗೆ ಗಮನ ನೀಡದೆ ನಿರ್ಲಕ್ಷ್ಯ ತೋರುತ್ತಿರುವುದು ಸಾರಿಗೆ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅದಕ್ಕಾಗಿ ನಿತ್ಯವೂ ನೋಟಿಸ್ ಪಡೆಯುತ್ತಲೇ ಇದ್ದಾರೆ ಎಂದರು.
ಇನ್ನಷ್ಟು ಜನ ಸವಾರರು ನಮಗೇನೂ ನೋಟಿಸ್ ಬಂದಿಲ್ಲ, ಇದು ಏನೂ ಮಾಡುವುದಿಲ್ಲ ಎಂಬಂತೆ ಮಾತನಾಡಿಕೊಳ್ಳುತ್ತಿದ್ದು, ಒಂದಲ್ಲ ಒಂದು ದಿನ ಅಂಥವರಿಗೂ ನೋಟಿಸ್ ಬಂದಾಗಲೇ ಎಚ್ಚರವಾಗುತ್ತದೆ.
ಯಾರಿಗೆ ನೋಟಿಸ್ ಬಂದಿದೆಯೋ ಅಂಥವರು ಬೇಗನೆ ಸ್ಟೇಷನ್‌ಗೆ ಬಂದು ನಿಗದಿತ ದಂಡವನ್ನು ಕಟ್ಟಬೇಕು. ನೋಟಿಸ್‌ನಲ್ಲಿರುವ ಮೊಬೈಲ್‌ಗೆ ಕರೆ ಮಾಡಿ ನಾವೂ ಸಹ ಎಚ್ಚರಿಕೆ ನೀಡುತ್ತೇವೆ. ಅದನ್ನೂ ಗಮನಿಸದೆ ಹೋದರೆ ಮೇಲಾಧಿಕಾರಿಗಳ ಆದೇಶದಂತೆ ಚಾರ್ಜ್ ಶೀಟ್ ಹಾಕಿ ಅಂಥವರನ್ನು ನ್ಯಾಯಾಲಯಕ್ಕೆ ಕಳಿಸುತ್ತೇವೆ.
ಕಳೆದ ಒಂದು ತಿಂಗಳಿನಿಂದ ಈ ಕಾರ್ಯ ಚಾಲ್ತಿಯಲ್ಲಿದೆ. ಇದರಿಂದ ವಾಹನ ಸವಾರರು ಸುಮ್ಮನೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅದರ ಬದಲಾಗಿ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸಿ ವಾಹನ ಚಲಾವಣೆ ಮಾಡಿದರೆ ಅವರಿಗೇ ಕ್ಷೇಮ ಎಂದು ಹೇಳಿದ ಐಶ್ವರ್ಯ ನಾಗರಾಳ, ಇನ್ನು ಮೇಲಾದರೂ ವಾಹನ ಸವಾರರು ಎಚ್ಚರಿಕೆಯಿಂದ ವಾಹನಗಳನ್ನು ಓಡಿಸಬೇಕೆಂದಿದ್ದಾರೆ.