ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳ ಹುಚ್ಚು ಭಾವನೆಗೆ ಕಡಿವಾಣ ಹಾಕಬೇಕು. ದುಃಖ-ಸಂತೋಷದ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು ಎಂದು ಗದಗ ವೈದ್ಯಕೀಯ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಬೊಮ್ಮನಳ್ಳಿ ಅಭಿಪ್ರಾಯಪಟ್ಟರು.
ಸಮೀಪದ ನೀಲಗುಂದ ಗ್ರಾಮದ ಶಿವರಾತ್ರಿ ಉತ್ಸವ ಕಾರ್ಯಕ್ರಮದ ಅನುಭಾವ ಗೋಷ್ಠಿಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರಯ ಮಾತನಾಡಿ, ನಾವು ಮಲಗುವ ಮುನ್ನ ದಿನದ ಬಗ್ಗೆ ಒಮ್ಮೆ ಅವಲೋಕನ ಮಾಡಬೇಕು. ಅಂದಾಗ ಮನಸ್ಸು ಶುದ್ಧವಾಗಿರುತ್ತದೆ. ಅರಿವು ಎಂಬುದನ್ನು ಕಲಿಸುವವನು ದೇವರು. ಸಣ್ಣ ಕಷ್ಟವನ್ನು ದೊಡ್ಡದು ಮಾಡುವದು ಮನಸ್ಸು. ಅದನ್ನು ಹತೋಟಿಯಲ್ಲಿಡಲು ಪೂಜೆ ಮಾಡಬೇಕು. ಅಂದಾಗ ಮಾತ್ರ ಮನಸ್ಸು ಶುದ್ಧವಾಗುತ್ತದೆ. ನಾವು ಮಾಡುವ ಊಟದ ಬಗ್ಗೆ ಗಮನವಿರಬೇಕು. ಆರೋಗ್ಯಕರ ಆಹಾರ ಸೇವಿಸಬೇಕು ಎಂದರು.
ಆಶೀರ್ವಚನ ನೀಡಿದ ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಇಂದು ಧಾರ್ಮಿಕ ಸಂಸ್ಕಾರ ಕಲಿಸಲು ಮಠ-ಮಾನ್ಯಗಳು ಬೇಕು. ಮನುಷ್ಯನಿಗೆ ಪುನರ್ಜನ್ಮ ತುಂಬುವ ಅಧಿಕಾರ ಗುರುಕುಲಕ್ಕಿದೆ. ತಪಸ್ಸಿನ ಶಕ್ತಿಯಿಂದ ಸಕಲ ರೋಗಗಳನ್ನು ಪರಿಹರಿಸುವ ಶಕ್ತಿಯಿದೆ. ಪ್ರತಿಯೊಬ್ಬರೂ ಸತ್ವಭರಿತ ಮಾತನ್ನಾಡಬೇಕು. ಸಂಸ್ಕಾರ, ಸದ್ವಿಚಾರಗಳು ಅರ್ಥಪೂರ್ಣ ಜೀವನ ನಡೆಸಲು ಅನುಕೂಲ ಎಂದರು.
ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿ, ಇಂದು ನಾವು ಪಿಜ್ಜಾ-ಬರ್ಗರ್‌ಗೆ ಮಾರು ಹೋಗಿದ್ದೇವೆ. ಉಚಿತ ಎನ್ನುವದು ಯಾವುದೂ ನಡೆಯುವದಿಲ್ಲ. ಅದು ತನ್ನ ಬೆಲೆ ಕಳೆದುಕೊಳ್ಳುತ್ತದೆ. ಕಾಯಕ ಮಾಡದೇ ಊಟ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು. ವಿದಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಣ್ಯರಾದ ಮಲ್ಲಿಕಾರ್ಜುನ ಸುರಕೋಡ, ರಾಮಣ್ಣ ಕಮಾಜಿ, ಯಲ್ಲಪ್ಪ ಅದರಗುಂಚಿ, ಚಿಂಚಲಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರ, ಉಪಾಧ್ಯಕ್ಷೆ ಲಲಿತಾ ಕುರಹಟ್ಟಿ ಇತರರು ಇದ್ದರು.
ಉತ್ತಮ ಸಂಸ್ಕಾರ ಸಿಗುವದು ವಿದ್ಯಾಮಂದಿರಗಳಲ್ಲಿ. ಜೀವನ ನಶ್ವರವಾಗಿದ್ದು, ಸದ್ಗತಿಯತ್ತ ಒಯ್ಯಲು ಶಿವರಾತ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇದು ಮನಸ್ಸು ಜಾಗೃತಗೊಳಿಸುವ ಕಾರ್ಯಕ್ರಮ. ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲ. ಅದನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ಪರಮಾತ್ಮನ ಧ್ಯಾನ ಮಾಡಬೇಕು ಎಂದು ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ನುಡಿದರು.