ವಿಜಯಸಾಕ್ಷಿ ಸುದ್ದಿ, ಗದಗ: ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ-ಎಸ್.ಟಿ, ಹಿಂದುಳಿದ ವರ್ಗಗಳ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಎಸ್.ಸಿ-ಎಸ್.ಟಿ, ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
2023ರ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಐದು ಗ್ಯಾರಂಟಿಗಳನ್ನು ಘೋಷಿಸಿತು. ಆಗ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ SCSP ಮತ್ತು TSP ಹಣ ಬಳಸುವುದಾಗಿ ಹೇಳಿರಲಿಲ್ಲ. ಆದರೆ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ತರುವಾಯ 2023ರಲ್ಲಿ 7713.15 ಸಾವಿರ ಕೋಟಿ ರೂ ಮತ್ತು 3430.85 ಸಾವಿರ ಕೋಟಿ ರೂ ಹೀಗೆ ಒಟ್ಟಾರೆ 11144.00 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತು.
ಕೆಲವೇ ತಿಂಗಳಲ್ಲಿ ಸರ್ಕಾರ ಸಂವೇದನೆ ಕಳೆದುಕೊಂಡು ದುರಹಂಕಾರದ ಸ್ಥಿತಿ ತಲುಪಿದೆ. 2024ರಲ್ಲಿ ಸರ್ಕಾರ ಇದೇ ಚಾಳಿಯನ್ನು ಮುಂದುವರೆಸಿತು. SCSP ನಿಧಿಯಿಂದ 9980.66 ಸಾವಿರ ಕೋಟಿ ರೂ ಮತ್ತು TSP ನಿಧಿಯಿಂದ 4302.02 ಸಾವಿರ ಕೋಟಿ ರೂ ಒಟ್ಟಾರೆ 14282.68 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿತು. ಈಗ ಸರ್ಕಾರ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ ಎಂದು ಮನವಿಯ ಮೂಲಕ ವಿವರಿಸಿದ್ದಾರೆ.
ನರಗುಂದ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಜನಾಂದೋಲನ ರಾಜ್ಯ ತಂಡದ ಉಸ್ತುವಾರಿ ಮಂಜುನಾಥ ಹೂಡಿ, ಎಂ.ಎಸ್. ಕರಿಗೌಡ್ರ, ರವಿ ದಂಡಿನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಪ್ಪ ಚವ್ಹಾಣ, ಲಿಂಗರಾಜ ಪಾಟೀಲ, ಗದಗ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಮುಳಗುಂದ, ಎಸ್.ಟಿ. ಮೋರ್ಚಾ ಅಧ್ಯಕ್ಷ ಈಶ್ವರಪ್ಪ ರಂಗಪ್ಪನವರ, ಪ್ರಧಾನ ಕಾರ್ಯದರ್ಶಿಗಳಾದ ವಾಯ್.ಪಿ. ಅಡ್ನೂರ, ಯಲ್ಲಪ್ಪ ಶಿರಿ, ಸುರೇಶ ಚಲವಾದಿ, ಮಲ್ಲಪ್ಪ ಮಾದರ, ಮಂಜುನಾಥ ಕೊಟ್ನಿಕಲ್, ಸಿದ್ದೇಶ ಹೂಗಾರ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಲಕ್ಷ್ಮಣ ದೊಡ್ಮನಿ, ಉಮೇಶಗೌಡ ಪಾಟೀಲ, ಎಂ. ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ನವೀನ ಕೊಟೆಕಲ್, ಡಿ.ಬಿ. ಕರಿಗೌಡ್ರ, ಮಹದೇವಪ್ಪ ಚಿಂಚಲಿ, ಮುತ್ತಪ್ಪ ಮೂಲಿಮನಿ, ರವಿ ವಗ್ಗನವರ, ರಾಜು ಹೊಂಗಲ, ವಸಂತ ಮೇಟಿ, ಮಹೇಶ ಮುಸ್ಕಿನಭಾವಿ, ಅಶೋಕ ಕರೂರ, ನಾಗರಾಜ ಕುಲಕರ್ಣಿ, ನಿರ್ಮಲಾ ಕೊಳ್ಳಿ, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ವಿಜಯಲಕ್ಷ್ಮೀ ಮಾನ್ವಿ, ಪದ್ಮಿನಿ ಮುತ್ತಲದಿನ್ನಿ, ಪಾಟಿಲ, ಕವಿತಾ ಬಂಗಾರಿ, ಶಿವು ಹಿರೇಮನಿಪಾಟೀಲ, ರಾಘವೇಂದ್ರ ಯಳವತ್ತಿ, ಪ್ರಕಾಶ ಅಂಗಡಿ, ಮಾಧುಸಾ ಮೇರವಾಡೆ, ಸುಧೀರ ಕಾಟಿಗರ, ನಾಗರಾಜ ತಳವಾರ ಹಾಗು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪ್ರಮುಖರು ಹಾಗು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ. ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್ಸಿ-ಎಸ್ಟಿ ಜನರ `ದಲಿತರ ಮೀಸಲು ನಿಧಿ‘ಗೆ ಕನ್ನ ಹಾಕುತ್ತದೆ ಎಂದರೆ ಇದನ್ನು ಸಾಮಾಜಿಕ ನ್ಯಾಯ ಎನ್ನಲು ಸಾಧ್ಯವೇ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಬಿಜೆಪಿ ಪ್ರಶ್ನಿಸಿದೆ.