ಸಿಎಂ ಸಿದ್ದರಾಮಯ್ಯ ಅಹಿಂದ ವಿರೋಧಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಿಎಂ ಸಿದ್ದರಾಮಯ್ಯ ಮಾತಿಗೊಮ್ಮೆ ತಾನೊಬ್ಬ ಅಹಿಂದ ನಾಯಕ, ಅಹಿಂದ ವರ್ಗ ಮೇಲೆತ್ತಿದವನು ಎಂದು ಸಾರ್ವಜನಿಕ ಸಭೆ-ಸಮಾರಂಭ, ಅಧಿವೇಶನದಲ್ಲಿ ಹೇಳಿಕೊಂಡು ಓಡಾಡುತ್ತಾರೆ. ಆದರೆ, ಅದೇ ಅಹಿಂದ ವರ್ಗದ ಹಣವನ್ನು ತಮ್ಮ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ಮೂಲಕ ಅಹಿಂದ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಲೋಕೋಪಯೋಗಿ ಸಚಿವ, ಹಾಲಿ ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಹುಚ್ಚು ಹಂಬಲದಿಂದ ಐದು ಗ್ಯಾರಂಟಿ ಜಾರಿಗೆ ತಂದರು. ಅದರ ಪರಿಣಾಮ ಇಂದು ಅಹಿಂದ ವರ್ಗ ಹಾಗೂ ದಲಿತ ಸಮುದಾಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಗ್ಯಾರಂಟಿ ಘೋಷಣೆ ಮಾಡುವ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ-ಗತಿಗಳನ್ನು ಅವಲೋಕಿಸಿ ಗ್ಯಾರಂಟಿ ಘೋಷಣೆಯ ನಿರ್ಧಾರ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಅಹಿಂದ ವರ್ಗಗಳ ಅನುದಾನವನ್ನು ನಿಲ್ಲಿಸಿ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಾಗಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕೆ.ಆರ್. ನಾರಾಯಣನ್ ಯೋಜನಾ ಆಯೋಗದ ಉಪಾಧ್ಯಕ್ಷರಾದ ಸಮಯದಲ್ಲಿ ಎಸ್.ಇ.ಪಿ, ಟಿ.ಎಸ್.ಪಿ ಜಾರಿಗೆ ತಂದರು. ಆದರೆ, ಇಂದು ರಾಜ್ಯ ಸರ್ಕಾರ ಆ ಅನುದಾನಕ್ಕೆ ಕೊಕ್ಕೆ ಹಾಕಿದೆ. ಚುನಾವಣೆ ಸಮಯದಲ್ಲಿ ಮಾತ್ರ ಅಹಿಂದ, ದಲಿತರ ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಚುನಾವಣೆಯ ನಂತರ ಅವರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಹಿರಿಯ ಮುಖಂಡರಾದ ಎಂ.ಎಸ್. ಕರಿಗೌಡ್ರ, ಮಂಜುನಾಥ ಹೂಡಿ, ಎಂ.ಎಂ. ಹಿರೇಮಠ, ರಮೇಶ್ ಸಜ್ಜಗಾರ, ರಾಜು ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಹಿಂದ ಹಾಗೂ ದಲಿತರ ಹಣ ಪೋಲಾಗುತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪನವರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಮಾರ್ಚ್ 7ರಂದು ಆರಂಭವಾಗುವ ಅಧಿವೇಶನದಲ್ಲಿ ಮತ್ತೆ 15 ಸಾವಿರ ಕೋಟಿ ರೂ ಹಣ ವಾಪಸ್ ಪಡೆಯಲು ಸಂಚು ರೂಪಿಸಿದ್ದಾರೆ. ಯಾವುದೇ ಕಾರಣಕ್ಕೂ ದಲಿತ ಹಾಗೂ ಅಹಿಂದ ವರ್ಗದ ಹಣ ದುರ್ಬಳಕೆಗೆ ಬಿಜೆಪಿ ಅವಕಾಶ ಕೊಡುವುದಿಲ್ಲ. ಸರ್ಕಾರದ ಈ ಸಂಚನ್ನು ತಡೆಯಲು ಬಿಜೆಪಿ ಅಧಿವೇಶನದಲ್ಲಿ ಹೋರಾಟ ಮಾಡುತ್ತದೆ.

– ಸಿ.ಸಿ. ಪಾಟೀಲ.

ಮಾಜಿ ಸಚಿವರು, ಶಾಸಕರು-ನರಗುಂದ.


Spread the love

LEAVE A REPLY

Please enter your comment!
Please enter your name here