ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಗಿದ್ದು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ದೇಶಾದ್ಯಂತ ಸಂಚಾರಕ್ಕೆ ಅವಕಾಶ ಕೋರ್ಟ್ ಅವಕಾಶ ಕೊಡಲಾಗಿದೆ.
ಹೈಕೋರ್ಟ್ನ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶ ನೀಡಿದ್ದು, ದೇಶಾದ್ಯಂತ ಓಡಾಡಲು ಅವಕಾಶ ನೀಡಿದೆ. ವಿದೇಶಕ್ಕೆ ಹೋಗುವಂತಿಲ್ಲ ಅಂತಾ ಆದೇಶ ಹೊರಡಿಸಿದೆ. ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು.
ಇದರಿಂದ ದರ್ಶನ್ ಅವರು ಎಲ್ಲೇ ತೆರಳಬೇಕಾದರೂ ಕೋರ್ಟ್ನ ಅನುಮತಿ ಪಡೆದೇ ಹೋಗಬೇಕಿತ್ತು. ಹೀಗಾಗಿ, ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು.
‘ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ’ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಆದಾಗ್ಯೂ, ಹೈಕೋರ್ಟ್ ದರ್ಶನ್ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ’ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಅವರು ರಿಲೀಫ್ ಆಗಿದ್ದಾರೆ.