ಉಡುಪಿ:- ನಿಯಮ ಮೀರಿ ಕರ್ಕಶ ಸದ್ದು ಮಾಡಿದ ಹಿನ್ನೆಲೆ ಉಡುಪಿಯಲ್ಲಿ ದುಬೈ ನೋಂದಣಿಯ ಕಾರುಗಳಿಗೆ ಮಣಿಪಾಲ ಪೊಲೀಸರು ದಂಡ ವಿಧಿಸಿದ್ದಾರೆ.
ಕೇರಳ ಮೂಲದ 29 ವರ್ಷದ ಸುಲೈಮನ್ ಮೊಹಮ್ಮದ್, 27 ವರ್ಷದ ಮೊಹಮ್ಮದ್ ಶರೀಫ್ ಮತ್ತು 25 ವರ್ಷದ ಅಬ್ದುಲ್ ನಜೀರ್ ಎಂಬ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ರಸ್ತೆಯಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆರು ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನು, ಸಮುದ್ರದ ಮುಖಾಂತರ ಹಡಗಿನಲ್ಲಿ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ. ಹಾಗೂ ಭಾರತಕ್ಕೆ 1 ಕೋಟಿ ರೂ. ಹಣ ಕಟ್ಟಿರುವುದಾಗಿ ಪೊಲೀಸರ ಬಳಿ ಯುವಕರು ತಿಳಿಸಿದ್ದಾರೆ.
ಕಾರುಗಳ ದಾಖಲೆಗಳನ್ನ ಆರ್‌ಟಿಓಗೆ ಕಳುಹಿಸಿದ ಪೊಲೀಸರು, ದುಬೈ ನೋಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ನಡೆಸಿದರು. ಕಾರು ಚಲಾಯಿಸುವ ಅನುಮತಿ ಇರುವ ಹಿನ್ನೆಲೆ ಆರ್‌ಟಿಓ ಅನುಮತಿ ಮೇರೆಗೆ ಕರ್ಕಶ ಶಬ್ದ ಮಾಡಿದ 3 ಕಾರುಗಳ ಮೇಲೆ 1,500 ರೂ. ಫೈನ್ ಹಾಕಿ ಕಳುಹಿಸಿದ್ದಾರೆ.