ಗದಗ:- ಸಾಕಷ್ಟು ರಾಜಕೀಯ ಹಾಗೂ ಕಾನೂನಾತ್ಮಕ ತಿರುವುಗಳನ್ನ ಪಡೆದುಕೊಂಡು ಫೆಬ್ರವರಿ 28 ರಂದು ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು.
ಆದರೆ ಇದೀಗ ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಕ್ಕೆ ಬ್ರೇಕ್ ಬಿದ್ದಿದೆ. ಫೆ.28 ರಂದೇ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡುವಂತೆ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಪ್ರತಿ ಚುನಾವಣಾ ಅಧಿಕಾರಿ ಕೈ ಸೇರುವ ಮೊದಲೇ ಚುನಾವಣೆ ಪ್ರಕ್ರಿಯೆ ಮುಗಿದು ಹೋಗಿತ್ತು. ಚುನಾವಣೆ ಮುಂದೂಡಿದ ಕೋರ್ಟ್ ಆದೇಶವನ್ನ ಪರಿಗಣಿಸದೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಿ ಅಧ್ಯಕ್ಷರಾಗಿ ಕೃಷ್ಣಾ ಪರಾಪೂರ, ಉಪಾಧ್ಯಕ್ಷರಾಗಿ ಶಕುಂತಲಾ ಅಕ್ಕಿ ಆಯ್ಕೆಯಾಗಿದ್ರು.
ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿ ಬಿಜೆಪಿ ಸದಸ್ಯರು ಸಂಸದ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಹೊರ ಬಂದಿದ್ದರು.
ಇದೀಗ ಚುನಾವಣೆ ಅಧಿಕಾರಿ ಎಸಿ ಗಂಗಪ್ಪ ಎಂ, ಉಚ್ಚ ನ್ಯಾಯಾಲಯದ ಮುಂದಿನ ಆದೇಶ ಆಗುವವರೆಗೆ ಅಧಿಕಾರ ನಡೆಸದಂತೆ ಸೂಚನೆ ಕೊಟ್ಟಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಯಾವುದೇ ಅಧಿಕಾರ ಹಾಗೂ ಕಾರ್ಯಭಾರ ನಡೆಸದಂತೆ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಗೆಲುವಿನ ಸಂತಸದಲ್ಲಿದ್ದ ಕಾಂಗ್ರೆಸ್ಗೆ ಸ್ವಲ್ಪ ಹಿನ್ನಡೆಯಾದಂತಾಗಿದೆ.