ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ರಾಷ್ಟ್ರೀಯ ನೀತಿ ರೂಪಿಸುವಂತೆ ಸೋನಿಯಾ ಗಾಂಧಿ ಸಲಹೆ!

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಮಹಾಮಾರಿ ದೇಶದಲ್ಲಿ ತನ್ನ ಕಬಂಧಬಾಹು ಚಾಚುತ್ತಿದೆ. ಜನ ಭಯದಲ್ಲಿ ಬದುಕು ಕಳೆಯುವಂತಾಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಿವಿ ಮಾತು ಹೇಳಿದ್ದಾರೆ.

ಈ ಕುರಿತು ವೀಡಿಯೋ ಮೂಲಕ ಮಾತನಾಡಿರುವ ಅವರು, ಸದ್ಯದ ಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ತಮ್ಮ ಕರ್ತವ್ಯಗಳನ್ನು ವ್ಯವಸ್ಥಿತವಾಗಿ ಹಾಗೂ ಪ್ರಾಮಾಣಿಕವಾಗಿ ಪಾಲಿಸಬೇಕಿದೆ. ಸೋಂಕು ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ರಚಿಸಬೇಕಾದ ಅನಿವಾರ್ಯತೆ ತುಂಬಾ ಇದೆ. ಅಲ್ಲದೇ, ಈ ಕೆಟ್ಟ ಸಂದರ್ಭದಲ್ಲಿ ರಾಜಕೀಯ ಒಮ್ಮತ ಸಾಧಿಸುವ ಅವಶ್ಯಕತೆ ಕೂಡ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಕೊರೊನಾ ಲಸಿಕೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ನೀಡಬೇಕು. ಅಲ್ಲದೇ, ಇದನ್ನು ನೀಡುವ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕು. ಹೆಚ್ಚುವರಿ ಉತ್ಪಾದನಾ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಯಾವಾಗಲೂ ಕೇಂದ್ರದೊಂದಿಗೆ ಇರುತ್ತದೆ. ಸದ್ಯದ ಸಂದರ್ಭದಲ್ಲಿ ಬಡ ಕುಟುಂಬಗಳು ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸುತ್ತಿವೆ. ಹೀಗಾಗಿ ಅಂತಹ ಬಡ ಕುಟುಂಬಗಳಿಗೆ ರೂ. 6 ಸಾವಿರ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಹೇಳಿದ್ದಾರೆ.

ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಏ. 30ರಂದು ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಬರೋಬ್ಬರಿ 3,523 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಜನ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ. ಹೀಗಾಗಿ ಆಡಳಿತ ಪಕ್ಷಗಳಿಗೆ ಪ್ರತಿ ಪಕ್ಷಗಳು ಕಿವಿ ಮಾತು ಹೇಳಿ ಎಚ್ಚರಿಸುತ್ತಿವೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.