ಬೆಂಗಳೂರು :- ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ವೈಟ್ ಆ್ಯಂಡ್ ಬ್ಲಾಕ್ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಶ್ರೀನಿವಾಸ್, ಅಂಬರೀಶ್, ಮಾರ್ಟಿನ್ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ಸಚಿನ್, ರವಿ, ವೆಂಕಟೇಶ್ಗಾಗಿ ಹುಡುಕಾಟ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.
ಆರೋಪಿಗಳು, ನಗದು ಒಂದು ಕೋಟಿ ರೂ ಕೊಟ್ಟರೆ, ಅಕೌಂಟ್ಗೆ ಇಪ್ಪತ್ತು ಲಕ್ಷ ರೂ ಸೇರಿಸಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ ಕೊಡುವುದಾಗಿ ನಂಬಿಸಿದ್ದರು. ಇದೇ ರೀತಿ ಚನ್ನಪಟ್ಟಣ ಮೂಲದ ಜಯಚಂದ್ರ ಅನ್ನೋರಿಗೆ ಇಂದಿರಾನಗರ ನಿವಾಸಿ ಶ್ರೀನಿವಾಸ್ ಅನ್ನೋನು ಇಂಥದೊಂದು ಡೀಲ್ ತಂದಿದ್ದ.
ಹೇಗೆ ಅಂತಾ ಕೇಳಿದರೆ, ನಮ್ಮದೊಂದು ಕಂಪನಿ ಇದೆ. ಅಲ್ಲಿ ಅಕೌಂಟ್ ಮೂಲಕ ಹಣ ಹಾಕಿದರೆ ದುಡ್ ಕಟ್ ಆಗುತ್ತೆ. ನಮಗೆ ನಗದು ಬೇಕು, ಬೇರೆ ಕಡೆಯಿಂದ ನಿಮಗೆ ಅಕೌಂಟ್ಗೆ ಹಣ ಹಾಕ್ತಿವಿ ಅಂತಾ ನಂಬಿಸಿದ್ದಾರೆ. ಜಯಚಂದ್ರ ಕೂಡ ಇಪ್ಪತ್ತು ಲಕ್ಷ ರೂ ಹಣಕ್ಕೆ ಆಸೆ ಬಿದ್ದು ಈ ಡೀಲ್ ಓಕೆ ಮಾಡಿದ್ದ. ಕಳೆದ ಒಂದನೇ ತಾರೀಖು ರಾತ್ರಿ ವೇಳೆ ವಿದ್ಯಾರಣ್ಯಪುರದ ಅದೊಂದು ಕಚೇರಿಯಲ್ಲಿ ಎಲ್ಲರು ಸೇರಿದ್ದರು. ಜಯಚಂದ್ರ ಒಂದು ಕೋಟಿ ರೂ ನಗದು ತಂದು ಟೇಬಲ್ ಮೇಲಿಟ್ಟು, ಒಂದು ಕೋಟಿ ಇಪ್ಪತ್ತು ಲಕ್ಷ ರೂ ಅಕೌಂಟ್ಗೆ ಹಾಕಿ ಅಂದಿದ್ದ.
ಯಾವಾಗ ಜಯಚಂದ್ರ ಒಂದು ಕೋಟಿ ರೂ ಹಣ ಆರೋಪಿ ಶ್ರೀನಿವಾಸ್ ಮುಂದಿಟ್ನೋ ಆರೋಪಿಗಳು ಆ ಹಣವನ್ನು ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅನುಮಾನಗೊಂಡ ಜಯಚಂದ್ರ ಮೊದಲು, ಅಕೌಂಟ್ಗೆ ಹಣ ಹಾಕಿ ಆಮೇಲೆ ದುಡ್ಡು ತಗೋಳಿ ಅಂದಿದ್ದಾರೆ. ಈ ಮಾತುಕತೆ ನಡೆಯುತ್ತಿರುವಾಗಲೇ ಕಚೇರಿಯಲ್ಲಿ ದಿಢೀರ್ ಕರೆಂಟ್ ಕಟ್ ಆಗಿದೆ. ಈ ವೇಳೆ ಒಂದು ಕೋಟಿ ರೂ ಮಂಗಮಾಯವಾಗಿತ್ತು. ತಕ್ಷಣ ಜೊತಗೆ ಇದ್ದ ಓರ್ವನನ್ನು ಅಂದರೆ ಮಾರ್ಟಿನ್ ನನ್ನು ಇಟ್ಟುಕೊಂಡು ಅಲರ್ಟ್ ಆದ ಜಯಚಂದ್ರ 112ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏರಿಯಾ ಪೂರ್ತಿ ಸುತ್ತುವರೆದು ಕೆಲವೇ ಗಂಟೆಗಳಲ್ಲಿ ಶ್ರೀನಿವಾಸ್, ಮಾರ್ಟಿನ್ ಮತ್ತು ಅಂಬರೀಶ್ನನ್ನು ಬಂಧಿಸಿದ್ದಾರೆ.



