ಚಿಕಬಳ್ಳಾಪುರ: ಹೆತ್ತ ತಾಯಿಯ ಶವವನ್ನು ಹೂಳಲು ಬಿಡದೆ ಮಕ್ಕಳು ಅಡ್ಡಿ ಮಾಡಿದ ಅಮಾನವೀಯ ಘಟನೆ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದಲ್ಲಿ ನಡೆದಿದೆ.ಅನಂತಕ್ಕ (90) ವಯೋಸಹಜ ಕಾಯಿಲೆಯಿಂದ ಮೃತಪಟ್ಟ ತಾಯಿಯಾಗಿದ್ದು, ಕಡಗತ್ತೂರಿನ ಅನಂತಕ್ಕಗೆ 4 ಜನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಪುತ್ರರು ಇದ್ದು, ಪತಿ ತೀರಿಕೊಂಡಿದ್ದರು.
ಅದಲ್ಲದೆ ಅನಂತಕ್ಕಗೆ ಎರಡು ಎಕರೆ ಜಮೀನು ಇತ್ತು, ಜಮೀನನ್ನು ಕೆಐಎಡಿಬಿ ವಶಪಡಿಸಿಕೊಂಡು ಪರಿಹಾರವಾಗಿ 93,75000 ರೂಪಾಯಿ ಹಣ ಕೊಟ್ಟಿತ್ತು. ಆದರೆ ಅದರಲ್ಲಿ ನಯಾ ಪೈಸೆ ಹೆಣ್ಣು ಮಕ್ಕಳಿಗೆ ಕೊಡದೆ ಗಂಡು ಮಕ್ಕಳೇ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸಹೋದರರ ನಡೆ ಖಂಡಿಸಿ 4 ಜನ ಹೆಣ್ಣು ಮಕ್ಕಳು ಕೋರ್ಟ್ ಮೊರೆ ಹೋಗಿದ್ದು 40 ಲಕ್ಷ ರೂಪಾಯಿ ಹಣ ನ್ಯಾಯಾಲಯದ ಆದೇಶದ ಮೇರೆಗೆ ಫ್ರೀಜ್ ಮಾಡಿಸಿದ್ದಾರಂತೆ. ಇದೇ ವಿಚಾರದಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳ ನಡುವೆ ಆಸ್ತಿ ಹಾಗೂ ಹಣಕಾಸಿನ ವಿವಾದ ತಲೆದೋರಿದ್ದು, ಮೃತ ಅಜ್ಜಿ ಹೆಣ್ಣು ಮಕ್ಕಳಿಗೂ ಪಾಲು ಕೊಡಬೇಕು ಎಂದು ಹೆಣ್ಣು ಮಕ್ಕಳ ಮನೆ ಕಡಗತ್ತೂರಿನಲ್ಲೇ ವಾಸವಾಗಿದ್ದಳು.
ಆದರೆ ಈಗ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅನಂತಕ್ಕ ಮೃತಪಟ್ಟಿದ್ದು, ಗಂಡನನ್ನು ಮಣ್ಣು ಮಾಡಿದ್ದ ಗೋರಿ ಪಕ್ಕದಲ್ಲೇ ಮಾಡಬೇಕು ಎಂಬುದು ಅನಂತಕ್ಕನ ಆಶೆಯಾಗಿತ್ತು. ಹೀಗಾಗಿ ಅಜ್ಜಿಯ ಕೊನೆಯಾಸೆ ಈಡೇರಿಸಬೇಕು ಅಂತ ಮಣ್ಣು ಮಾಡಲು ಬಂದ ಹೆಣ್ಣು ಮಕ್ಕಳಿಗೆ ಅಣ್ಣಂದಿರು ಅಡ್ಡಿ ಮಾಡಿದ್ದಾರಂತೆ.
ಮಣ್ಣು ಮಾಡಲು ಬಂದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ರಂತೆ. ಇಲ್ಲ ಅಂದ್ರೆ 40 ಲಕ್ಷ ರೂ ಹಣ ವಾಪಾಸ್ ಕೊಡಿ ಅಂತ ಡಿಮ್ಯಾಂಡ್ ಮಾಡಿದ್ರು ಅಂತ ಆರೋಪಿಸಿದ್ದಾರೆ.
ಇನ್ನೂ ತಾಯಿಯ ಅಂತ್ಯಕ್ರಿಯೆಗೆ, ಹೆತ್ತ ಗಂಡು ಮಕ್ಕಳಾದ ನಟರಾಜ್ ಹಾಗೂ ನಾರಾಯಣಪ್ಪ ಅಡ್ಡಿ ಮಾಡಿದ ಕಾರಣದಿಂದ ದಿಕ್ಕು ತೋಚದ ಹೆಣ್ಣು ಮಕ್ಕಳು, ಅಜ್ಜಿಯ ಶವದ ಸಮೇತ ಸ್ಥಳೀಯ ಪೊಲೀಸ್ ಠಾಣೆ ಬಳಿ ಹೋಗಿ ಅವಲತ್ತುಕೊಂಡಿದ್ದಾರೆ.
ಕೂಡಲೇ ವಿಚಾರ ತಿಳಿದ ಗೌರಿಬಿದನೂರು ತಹಶೀಲ್ದಾರ್ ಮಹೇಶ್ ಪತ್ರಿ ಗಮನಕ್ಕೂ ತರಲಾಗಿದ್ದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಕುಟುಂಬಸ್ಥರ ಮನವೊಲಿಸಿದ್ದಾರೆ. ತಹಶೀಲ್ದಾರ್ ಮದ್ಯಸ್ಥಿಕೆಯಿಂದ ಅಂತ್ಯ ಸಂಸ್ಕಾರಕ್ಕೆ ಒಪ್ಪಿಕೊಂಡಿದ್ದರು.
ಅಜ್ಜಿಯ ಶವಕ್ಕೆ ಹೂವಿನ ಹಾರ ಹಾಕಿ ನಮಿಸಿ ಅಂತ್ಯ ಸಂಸ್ಕಾರಕ್ಕೆ ಸೂಚನೆ ನೀಡಿದ್ದು, ಜೆಸಿಬಿ ಸಮೇತ ಗ್ರಾಮಕ್ಕೆ ತೆರಳಿ ಗುಂಡಿ ತೋಡಿಸಿ ಅಜ್ಜಿಯ ಅಂತಿಮ ಆಸೆಯಂತೆ ಗಂಡನ ಗೋರಿಯ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ. ಆದರೆ ಮೃತ ಗಂಡ ಮಕ್ಕಳ ಅಮಾನವೀಯ ವರ್ತನೆ ಚರ್ಚೆಗೆ ಗ್ರಾಸವಾಗಿದೆ.


