ವಿಜಯಸಾಕ್ಷಿ ಸುದ್ದಿ, ಗದಗ: ಪಂ.ಪಂಚಾಕ್ಷರ ಗವಾಯಿಗಳವರು ಸಂಗೀತ ಲೋಕವನ್ನು ಉದ್ಧಾರ ಮಾಡಿದ ಮಹಾನ್ ಪುಣ್ಯಾತ್ಮರು. ಇವರ ಶಿಷ್ಯರಾದ ಪಂ.ಡಾ. ಪುಟ್ಟರಾಜ ಕವಿ ಗವಾಯಿಗಳವರೂ ಸಹ ಅಭೂತಪೂರ್ವ ಸಂಗೀತ ತಜ್ಞರಾಗಿದ್ದರು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಬುಧವಾರ ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಶ್ರೀಮಠದ ಕೃಪಾಶ್ರಯದಲ್ಲಿ ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ 333ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇದೊಂದು ಅಪರೂಪದ ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ ಅವರಿಗೆ `ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025′ ಪುರಸ್ಕಾರ ನೀಡಿದ್ದು ಶ್ಲಾಘನೀಯ. ಈ ಗೌರವದಿಂದ ಪಂಚಾಕ್ಷರ ಗವಾಯಿಗಳವರನ್ನೇ ಗೌರವಿಸಿದಂತಾಗಿದೆ ಎಂದು ಬಣ್ಣಿಸಿದರು.
ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿ ಹಾಗೂ ಅಡವೀಂದ್ರಸ್ವಾಮಿ ಮಠದಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದು ಅಭಿನಂದನೀಯ. ನಾಡಿನ ಹೆಸರಾಂತ ಸಂಗೀತ ಕಲಾವಿದರು ನೀಡಿದ ಸಂಗೀತ ಕಾರ್ಯಕ್ರಮ ವಿಶಿಷ್ಠವಾಗಿತ್ತು. ಈ ಸಂಗೀತ ಸಾಧಕರಿಗೆ ಭವಿಷ್ಯದಲ್ಲಿ ಹೆಚ್ಚಿನ ಸ್ಥಾನಮಾನಗಳು ಪ್ರಾಪ್ತಿಯಾಗಲಿ ಎಂದರು.
ನೇತೃತ್ವ ವಹಿಸಿದ್ದ ಹಾವೇರಿ ಹುಕ್ಕೇರಿಮಠದ ಪೂಜ್ಯ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಗದಗ ಪರಿಸರದಲ್ಲಿ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ ನಡೆಸಿದ್ದು, ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳನ್ನು ಸ್ಮರಿಸುವ, ಅವರನ್ನು ಅಜರಾಮರಗೊಳಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದರು.
ಸಮ್ಮುಖವನ್ನು ಅಡವೀಂದ್ರ ಮಠದ ಧರ್ಮದರ್ಶಿ ವೇ. ಮಹೇಶ್ವರಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಪಂ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಅಂತರಾಷ್ಟ್ರೀಯ ಖ್ಯಾತ ಗಾಯಕ ಧಾರವಾಡದ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ ಅವರಿಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.
ಮುಖ್ಯ ಅತಿಥಿಗಳಾಗಿ ಬಸವರಾಜ ಪಲ್ಲೇದ, ಲೀಲಾವತಿ ಬಿಳೇಯಲಿ, ನಾಗರಾಜ ಹೊಸೂರ ಆಗಮಿಸಿದ್ದರು. ಸಮಾರಂಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ರಾಜ್ಯ ಪ್ರಶಸ್ತಿ ವಿಜೇತೆ ಡಾ. ವ್ಹಿ.ಬಿ. ಹಿರೇಮಠ ಹಾಗೂ ಪ್ರಾಚಾರ್ಯ ವ್ಹಿ.ಎಂ. ಗುರುಮಠ ಅವರನ್ನು ಸನ್ಮಾನಿಸಲಾಯಿತು.
ಸಿದ್ಧಲಿಂಗಯ್ಯಶಾಸ್ತ್ರಿ ಗಡ್ಡದಮಠ ಸ್ವಾಗತಿಸಿದರು, ಯು.ಆರ್. ಭೂಸನೂರಮಠ ಪರಿಚಯಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಸೇವಾ ಸಮಿತಿಯ ಕಾರ್ಯದರ್ಶಿ ಮಲ್ಲಯ್ಯ ಶಿರೋಳಮಠ ವಂದಿಸಿದರು.
ಬಾಗಲಕೋಟೆಯ ಸಂಗೀತ ಪ್ರಾಧ್ಯಾಪಕ ಡಾ.ಸಿದ್ಧರಾಮಯ್ಯ ಮಠಪತಿ ಘರಾನಾ ನುಡಿಗಳನ್ನಾಡಿ, ಸಂಗೀತದಲ್ಲಿ ಹಲವರು ರೀತಿಯ ಘರಾನಾಗಳಿದ್ದು, ಈ ಮಾಲಿಕೆಗೆ ಧಾರವಾಡ ಹಾಗೂ ಗದಗ ಘರಾನಾಗಳು ಇತ್ತಿಚೆಗೆ ಸೇರ್ಪಡೆಯಾಗಿವೆ. ಇಂತಹ ಘರಾನಾಗಳಿಗೆ ಪಂಚಾಕ್ಷರಿ ಹಾಗೂ ಪುಟ್ಟರಾಜರು ಹೊಸ ಸ್ವರೂಪ ನೀಡಿದವರು. ಈ ಎಲ್ಲ ಘರಾನಾಗಳನ್ನೇ ಕ್ರೋಢೀಕರಿಸಿಕೊಂಡು ಪಿಎಚ್‌ಡಿ ಅಧ್ಯಯನ ಮಾಡುವಷ್ಟರ ಮಟ್ಟಿಗೆ ವಿಫುಲವಾದ ಮಾಹಿತಿ ಲಭ್ಯವಿದ್ದು, ಅಂತಹ ಕಾರ್ಯಕ್ಕೆ ಅಧ್ಯಯನಶೀಲರು ಮುಂದಾಗಬೇಕೆಂದು ಹೇಳಿದರು.
ಡಾ.ಸಿದ್ಧರಾಮಯ್ಯ ಮಠಪತಿ, ಡಾ. ನಾರಾಯಣ ಹಿರೇಕೊಳಚಿ, ಡಾ. ಗುರುಬಸವ ಮಹಾಮನಿ, ಡಾ. ಹನುಮಂತ ಕೊಡಗಾನೂರ, ಡಾ. ಶಿವಬಸಯ್ಯ ಗಡ್ಡದಮಠ, ಪ್ರೊ. ಎಂ.ಎಸ್. ಮಠದ, ಸುಕ್ರುಸಾಬ ಮುಲ್ಲಾ, ರೇಷ್ಮಾ ಭಟ್, ಶರಣಕುಮಾರ ಗುತ್ತರಗಿ, ಬಸವರಾಜ ಹಿರೇಮಠ, ಕೃತಿಕಾ ಜಂಗಿನಮಠ, ಭೀಮಾಶಂಕರ ಬಿದನೂರ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.