ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಉತ್ತರಾಭಿಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಣ ನಿಮಿತ್ತ ಮಾ.7ರಿಂದ 9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ಬಾಲೆಹೊಸೂರು/ ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನೆರವೇರಲಿವೆ ಎಂದು ದೇವಸ್ಥಾನ ಜೀರ್ಣೋದ್ದಾರ ಕಮಿಟಿ ಅಧ್ಯಕ್ಷರಾದ ಗೋಪಾಲರಾವ್ ಕುಬೇರ ತಿಳಿಸಿದರು.
ಅವರು ಈ ಕುರಿತು ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಐಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮೊದಲು ಕಟ್ಟಿಗೆ ಮಡಿಗೆ ಹೊಂದಿ ಶಿಥಿಲಾವಸ್ಥೆ ತಲುಪಿತ್ತು. ಭಕ್ತರೆಲ್ಲರ ಒಮ್ಮತದ ನಿರ್ಧಾರದಿಂದ 4 ವರ್ಷಗಳ ಹಿಂದೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ನಿರ್ಣಯಿಸಿ ಗ್ರಾಮದ ಭಕ್ತರೆಲ್ಲ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಹಳೆಯ ದೇವಸ್ಥಾನ ತೆರವುಗೊಳಿಸಿದರು. ಪ್ರಾರಂಭದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದುಕೊಳ್ಳಲಾಗಿತ್ತು. ಆದರೆ ಆಂಜನೇಯ ಸ್ವಾಮಿಯ ಶಕ್ತಿಯೆಂಬಂತೆ ಭಕ್ತರೆಲ್ಲ ಧನ ಸಹಾಯ/ದೇಣಿಗೆ ಸಲ್ಲಿಸಿದ್ದರಿಂದ 90 ಲಕ್ಷ ರೂ ವೆಚ್ಚದಲ್ಲಿ ಕಜ್ಜರಿ ಕಲ್ಲಿನಿಂದ ಸುಂದರ ದೇವಸ್ಥಾನ ನಿರ್ಮಾಣಗೊಂಡು ಲೋಕಾರ್ಪಣೆಗೆ ಅಣಿಯಾಗಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರಾದ ರಾಮಣ್ಣ ಹಾವನೂರ, ಎಸ್.ಜಿ. ಮಾದಾಪುರ ಮಾಹಿತಿ ನೀಡಿ, ಕ್ರಿ.ಶ 5ನೇ ಶತಮಾನದ ಶಾತವಾಹನ ಕಾಲದಲ್ಲಿ ಆಡಳಿತಕ್ಕೊಳಪಟ್ಟ ದೇವಸ್ಥಾನ ಇದಾಗಿದೆಯಂತೆ. ನಂತರ ಹಾವನೂರ ದಳವಾಯಿ, ಸವಣೂರ ನವಾಬರ ಕಾಲದಲ್ಲಿ ದೇವಸ್ಥಾನದ ಸುತ್ತಲೂ ಇರುವ ಕೋಟೆ(ಹುಡೇವು) ಬಾವಿ ನಿರ್ಮಾಣಗೊಂಡಿವೆ. 7 ಊರು ಕೂಡಿ ಬಾಲೆಹೊಸೂರ ಆಗಿದೆ. ಓರ್ವ ಕೆರಗೊಂಡ ಮನೆತನದ ಹುಡುಗನ ಕನಸಿನಲ್ಲಿ ಬಂದು ಹುಡುಗ ಆಕಳು ಮೇಯಿಸಲು ಹೋದಾಗ ಅವನ ಸಿಕ್ಕ ಆಂಜನೇಯ ಮೂರ್ತಿಯನ್ನು ತಂದು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದ್ದಾನೆ ಎನ್ನಲಾಗುತ್ತದೆ.
ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ಈ ನೆಲದಲ್ಲಿ ದೇವರ ಶಿಲಾಮೂರ್ತಿಗಳು ಲಭಿಸಿವೆ. ಒಟ್ಟು 3 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಮೂಲ ಮೂರ್ತಿಗೆ ಯಾವುದೇ ಧಕ್ಕೆ ಬರದಂತೆ ನೂತನ ದೇವಸ್ಥಾನ ನಿರ್ಮಿಸಲಾಗಿದೆ. ಅತ್ಯಂತ ಜಾಗೃತ ದೇವರಾದ ಶ್ರೀ ಆಂಜನೇಯ ಸ್ವಾಮಿಗೆ ಗ್ರಾಮದ ಸರ್ವ ಜಾತಿ-ಜನಾಂಗದವರ ಆರಾಧ್ಯ ದೈವವಾಗಿದೆ. ಭಕ್ತರ ಇಷ್ಟಾರ್ಥ ಸಿದ್ಧಿಸುವ ದೇವಸ್ಥಾನ ಅಪಾರ ಭಕ್ತ ಸಮೂಹ ಹೊಂದಿದೆ. ಪ್ರಾಚೀನ ಇತಿಹಾಸ, ಹಿನ್ನೆಲೆ ಹೊಂದಿರುವ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮತ್ತು ಜಿಲ್ಲೆಯವರೇ ಆದ ಪ್ರವಾಸೋದ್ಯಮ ಇಲಾಖೆ ಸಚಿವರು ಆದ್ಯತೆ ನೀಡಬೇಕು ಎಂದರು.
ಈ ವೇಳೆ ಚನ್ನಮ್ಮ ಕೆಂಚಪ್ಪ ಮೈಲಾರಿ, ಶಿವಣ್ಣ ಕಬ್ಬೇರ, ಸೋಮಯ್ಯ ಚನ್ನಾಪುರಮಠ, ಬಸವರೆಡ್ಡಿ ಹನಮರೆಡ್ಡಿ, ಯಲ್ಲಪ್ಪ ಸೂರಣಗಿ, ನಿಂಗಪ್ಪ ಮಡಿವಾಳರ, ಬಸವರಾಜ ನೀಲಣ್ಣವರ, ಅಶೋಕ ಮಾಗಿ, ಸಿದ್ದಲಿಂಸ್ವಾಮಿ ಪಶುಪತಿಮಠ, ಸುರೇಶ ಹಾವನೂರ, ರಾಜು ಬೆಂಚಳ್ಳಿ ಸೇರಿ ಅನೇಕರಿದ್ದರು.
**ಬಾಕ್ಸ್**
ಲಕ್ಷೆö್ಮÃಶ್ವರದ ಹಾಲುಮತ ಸಮಾಜದವರು 45 ಕೆಜಿ ತೂಕದ ಕಂಚಿನ ಕಳಸ, ಹಳೆಯ ವಿದ್ಯಾರ್ಥಿಗಳು 1 ಕೆಜಿ ಬೆಳ್ಳಿ ಪ್ರಭಾವಳಿ ಕಾಣಿಕೆ ಸಲ್ಲಿಸಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿ 11 ಲಕ್ಷ ರೂ ಸಂಗ್ರಹವಾಗಿತ್ತು. ಗ್ರಾಮದ ಭಕ್ತರೆಲ್ಲ ಸೇರಿ 35 ಲಕ್ಷ ರೂ ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಸಂಘ, 2 ಲಕ್ಷ ರೂ ಸರ್ಕಾರದ ಅನುದಾನ, ದಾನಿಗಳ ಸಹಾಯ ಸೇರಿ ಒಟ್ಟು 90 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ. ಅಲ್ಲದೇ ಗ್ರಾಮದ ಯುವಕರೇ ಲಕ್ಷ ರೂ ಖರ್ಚು ಮಾಡಿ ದೇವಸ್ಥಾನದ ಪ್ರಾಂಗಣದಲ್ಲಿ ರಾಮ-ಲಕ್ಷö್ಮಣ-ಸೀತಾದೇವಿಯ ಸುಂದರ ಮಂಟಪ ನಿರ್ಮಿಸಿದ್ದಾರೆ ಎಂದು ಗೋಪಾಲರಾವ್ ಕುಬೇರ ತಿಳಿಸಿದರು.