ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ಮುಂಗಡ ಪತ್ರ ಮಂಡನೆ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರ ದಾಖಲೆ 16ನೇ ಬಜೆಟ್ನಲ್ಲಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆಯವ್ಯಯ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಇದೆ.
ಇನ್ನೂ ಈ ವೇಳೆ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ|| ಮನಮೋಹನ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು.
ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್.ಸಿ.ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದರು.
ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 31 ಮಹಿಳಾ ಕಾಲೇಜುಗಳನ್ನು ಹಿಂದಿನ ವರ್ಷದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಉಳಿದ 26 ಕಾಲೇಜುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 26 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.