ಗದಗ ಜಿಲ್ಲೆಗೆ ಮತ್ತೆ ನಿರಾಸೆ: ಬಜೆಟ್‌ನಲ್ಲಿ ವಿಶೇಷ ಕೊಡುಗೆ ಘೋಷಿಸದ ಸಿಎಂ ಸಿದ್ದರಾಮಯ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದಿನ ವರ್ಷ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಗದಗ ಜಿಲ್ಲಾ ಆಸ್ಪತ್ರೆಗೆ 10 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಯುನಿಟ್, ವೈದ್ಯಕೀಯ ಯಂತ್ರೋಪಕರಣ ಖರೀದಿಗೆ ಅನುದಾನ, 100 ಹಾಸಿಗೆಯ ಶಿರಹಟ್ಟಿ ತಾಲೂಕು ಆಸ್ಪತ್ರೆ ಸಹಿತ ಕೆಲ ಯೋಜನೆಗಳು ಘೋಷಣೆಯಾಗಿದ್ದವು. ಆದರೆ ಈ ಬಾರಿ ಯಾವುದೇ ವಿಶೇಷ ಘೋಷಣೆಗಳಿಲ್ಲದೆ ಗದಗ ಜಿಲ್ಲೆಗೆ ವಿಶೇಷ ಕೊಡುಗೆ ಮರೀಚಿಕೆಯಾಗಿದೆ.

Advertisement

ಪ್ರವಾಸೋದ್ಯಮ ಬೆಳವಣಿಗೆಯ ಉದ್ದೇಶದಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ, ಲಕ್ಕುಂಡಿಯ ಐತಿಹಾಸಿಕ ವಾಸ್ತುಶಿಲ್ಪದ ದೇವಸ್ಥಾನಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲು ಅಗತ್ಯ ಕ್ರಮ, ಲಕ್ಕುಂಡಿ ಪ್ರಾಚ್ಯಾವಶೇಷಗಳ ಸಂಗ್ರಹಣೆಗೆ ಬಯಲು ವಸ್ತು ಸಂಗ್ರಹಾಲಯವನ್ನು ಘೋಷಣೆ ಮತ್ತು ಡಂಬಳ ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ತಜ್ಞರಿಂದ ಕಾರ್ಯಸಾಧು ವರದಿ ತರಿಸಿಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಜಿಲ್ಲೆಗೆ ವಿಶೇಷ ಕೊಡುಗೆ ಸಿಗದಿದ್ದರೂ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟ ರೂ. ಮೀಸಲಿಟ್ಟಿರುವುದು, ಮಳೆಯಾಶ್ರಿತ ಬೆಳೆಯಲ್ಲಿ 1.81 ಲಕ್ಷ ರೈತರಿಗೆ ಹನಿ-ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ., 12 ಸಾವಿರ ಕೃಷಿ ಹೊಂಡಗಳ ನಿರ್ಮಾಣ, ಸಮಗ್ರ ಮಳೆಯಾಶ್ರಿತ ಕೃಷಿ ನೀತಿ, ದೇಸಿ ತಳಿಗಳ ಬೀಜ ಬ್ಯಾಂಕ್, ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ, ಅನುಗ್ರಹ ಯೋಜನೆ, ಎಪಿಎಂಸಿ ಕಾರ್ಮಿಕರ ವಿಮಾ ಮೊತ್ತ ಹೆಚ್ಚಳ, ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಕೃಷಿ ಪಥ ಯೋಜನೆ ರೈತರಲ್ಲಿ ಸಂತಸ ಮೂಡಿಸಿದೆ.

ಪವನ ವಿದ್ಯುತ್ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೃಷಿ ಭೂಮಿಗೆ ಭೂ ಪರಿವರ್ತನೆ ಪ್ರಕ್ರಿಯೆಯಿಂದ ವಿನಾಯಿತಿ, ನೇಕಾರರ ಪ್ಯಾಕೇಜ್-2 ಯೋಜನೆಯನ್ನು ಜಿಲ್ಲೆಯ ಜನ ಸಂತಸದಿಂದ ಸ್ವಾಗತಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ 200 ಕೋಟಿ ರೂ. ಬಿಡುಗಡೆಯಾಗಿರುವುದು, ಗದಗ ತಾಲೂಕಿನ ಕೊಟುಮಚಗಿ-ವೀರಾಪುರ ನಡುವಿನ ಹಿರೇಹಳ್ಳದ ಹೂಳೆತ್ತುವ ಮೂಲಕ 60 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳು ಗದಗ ಜಿಲ್ಲೆ ಜನರಿಗೂ ಅನುಕೂಲಕರವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಿಎಂ ಸಿದ್ದರಾಮಯ್ಯರವರು ಶುಕ್ರವಾರ ಮಂಡಿಸಿರುವ ಮುಂಗಡ ಪತ್ರವು ಚೈತನ್ಯಶೀಲ ಅಭಿವೃದ್ಧಿಪರ ಮತ್ತು ಅರ್ಥವ್ಯವಸ್ಥೆಯನ್ನು ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರವಾಗಿದೆ. ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸಮಾನ ಹಂಚಿಕೆ ಮತ್ತು ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳುವ ಅಭಿವೃದ್ಧಿಶೀಲ ಮುಂಗಡ ಪತ್ರವನ್ನು ಸಿದ್ದರಾಮಯ್ಯರವರು ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ, ಸಮಾಜ ಕಲ್ಯಾಣ ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಎಲ್ಲ ಮಹತ್ವದ ಯೋಜನೆಗಳಿಗಾಗಿ ಸಿಎಂ ಸಿದ್ದರಾಮಯ್ಯರನ್ನು ಅಭಿನಂದಿಸುತ್ತೇನೆ.

– ಎಚ್.ಕೆ. ಪಾಟೀಲ.

ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here