ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ರಾಜ್ಯ ರಾಜಕೀಯದ ಇತಿಹಾಸದಲ್ಲಿ ಈವರೆಗೂ ಸಾಕಷ್ಟು ಚುನಾವಣೆಗಳು – ಉಪ ಚುನಾವಣೆಗಳು ನಡೆದಿವೆ. ಘಟಾನುಘಟಿ ನಾಯಕರು ಈ ಚುನಾವಣೆಗಳ ಜವಾಬ್ದಾರಿಗಳನ್ನು ಹೊತ್ತು ಸೋಲು ಮತ್ತು ಗೆಲುವು ಎರಡನ್ನೂ ಅನುಭವಿಸಿದ್ದಾರೆ. ಆದ್ರೆ ರಾಜ್ಯದ ಆ ಒಬ್ಬ ಜನ ನಾಯಕ ಮಾತ್ರ ಸೋಲಿಗಿಂತಲೂ ಹೆಚ್ಚು ಗೆಲುವುಗಳನ್ನೇ ಕಂಡಿದ್ದಾರೆ. ಆ ನಾಯಕ ಬೇರ್ಯಾರು ಅಲ್ಲ ರಾಜ್ಯದ ವಸತಿ ಸಚಿವ ವಿ.ಸೋಮಣ್ಣ.
ವಿ.ಸೋಮಣ್ಣ ರಾಜ್ಯ ಕಂಡ ಸರಳ ರಾಜಕಾರಣಿಗಳಲ್ಲಿ ಒಬ್ಬರು. ಅನವಶ್ಯಕ ಅಬ್ಬರವಿಲ್ಲದೇ ಕಾಯಕವೇ ಕೈಲಾಸವೆಂಬಂತೆ ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುವ ಜನನಾಯಕರು. ಅದರಲ್ಲೂ ಚುನಾವಣೆ – ಉಪಚುನಾವಣಗಳ ವಿಷಯಕ್ಕೆ ಬಂದರೆ ವಿ.ಸೋಮಣ್ಣ ಅವರ ತಂತ್ರಗಾರಿಕೆಯೇ ಬೇರೆ. ಅವರು ಎಲೆಕ್ಷನ್ ಜವಾಬ್ದಾರಿ ವಹಿಸಿಕೊಂಡರು ಅಂದ್ರೆ ಅಲ್ಲಿ ಪಕ್ಷಕ್ಕೆ ಗೆಲುವು ಕಟ್ಟಿಟ್ಟಬುತ್ತಿ.
ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಚಾಣಕ್ಯನಂತೆ ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು.
ವಿ ಸೋಮಣ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಬಸವಕಲ್ಯಾಣದಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದು ಮಾತ್ರವಲ್ಲದೇ ಸೋಮಣ್ಣ ಹಿಂದೆ ಹಲವು ಚುನಾವಣೆಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಅಲ್ಲೂ ಕೂಡ ಯಶ ಕಂಡಿದ್ದರು. ರಾಜ್ಯ ಬಿಜೆಪಿಯ ಶಿಸ್ತಿನ ಸಿಪಾಯಿ ವಿ.ಸೋಮಣ್ಣ ಈ ರೀತಿ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಪಕ್ಷಕ್ಕೆ ಗೆಲುವು ತಂದುಕೊಟ್ಟಿರುವುದು ಮೊದಲೇನಲ್ಲ.
ತುಮಕೂರು ಲೋಕಸಭಾ ಎಲೆಕ್ಷನ್ 2019-
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದ್ದರು. ಆಗ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣ ಅವರು.
- ಚಿಂಚೋಳಿ ಬೈ ಎಲೆಕ್ಷನ್ –2019 -ಅವಿನಾಶ್ ಜಾಧವ್ ಗೆದ್ದಾಗಲೂ ಉಸ್ತುವಾರಿ ವಹಿಸಿಕೊಂಡಿದ್ದು ಸಚಿವ ವಿ. ಸೋಮಣ್ಣನವರು.
- ದೇವದುರ್ಗ ಬೈ ಎಲೆಕ್ಷನ್ – 2016 – ಶಿವನಗೌಡ ನಾಯಕ ಜಯ ಗಳಿಸಿದ್ದರು. ಆಗಲೂ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
- ಚನ್ನಪಟ್ಟಣ ಬೈ ಎಲೆಕ್ಷನ್ – 2011- ಸಿ.ಪಿ. ಯೋಗಿಶ್ವರ್ ಗೆಲುವು ಸಾಧಿಸಿದ್ದರು. ಆಗಲೂ ವಿ. ಸೋಮಣ್ಣನವರು ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
- ಕಡೂರು ಬೈ ಎಲೆಕ್ಷನ್ – 2010 – ಡಾ. ವೈ.ಸಿ. ವಿಶ್ವನಾಥ್ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
- ಕೊಪ್ಪಳ ಬೈ ಎಲೆಕ್ಷನ್ – 2011 – ಕೆ.ಎಸ್. ಅಮರಪ್ಪ ಅವರಿಗೆ ಜಯ. ಉಸ್ತುವಾರಿ ವಹಿಸಿಕೊಂಡಿದ್ದು ಚಾಣಕ್ಷ ನಾಯಕ ವಿ. ಸೋಮಣ್ಣನವರು.
- ಬೆಂಗಳೂರು ದಕ್ಷಿಣ ಲೋಕಸಭಾ – 2009, 2014, 2018- 2009, 2014ರಲ್ಲಿ ಅನಂತ್ ಕುಮಾರ್ ಮತ್ತು 2018ರಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲಾ ಚುನಾವಣೆಗಳಲ್ಲೂ ವಿ. ಸೋಮಣ್ಣನವರು ಮುಂಚೂಣಿಯಲ್ಲಿದ್ದರು.
-ತುಮಕೂರು ಲೋಕಸಭಾ ಎಲೆಕ್ಷನ್ – 2009ರಲ್ಲೂ ವಿ. ಸೋಮಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು.
- 2015ರ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ 11 ಸ್ಥಾನಗಳನ್ನು ಗೆಲ್ಲುವಲ್ಲಿ ವಿ. ಸೋಮಣ್ಣನವರ ಪಾತ್ರ ಮಹತ್ವದ್ದಾಗಿತ್ತು.
2010 ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 16 ಸ್ಥಾನಗಳನ್ನು ಗೆದ್ದಿದ್ದು ಕೂಡ ವಿ. ಸೋಮಣ್ಣನನವರ ವರ್ಚಸ್ಸಿನಿಂದಲೇ.
2019 ಬಿಬಿಎಂಪಿ ಕಾವೇರಿಪುರ ಬೈ ಎಲೆಕ್ಷನ್ ನಲ್ಲಿ ಪಲ್ಲವಿ ಚಿನ್ನಪ್ಪ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಿನಲ್ಲಿ ವಿ. ಸೋಮಣ್ಣನವರು ತಮಗೆ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ರಾಜಕೀಯ ನೈಪುಣ್ಯತೆ ಅವರಲ್ಲಿದೆ. ಹೀಗಾಗಿ ಚುನಾವಣಾ ಉಸ್ತುವಾರಿ ಅಖಾಡದಲ್ಲಿ ಸೋಮಣ್ಣನವರು ಸೋಲಿಲ್ಲದ ಸರದಾರನೇ ಸರಿ. ಪಕ್ಷ ತನ್ನ ಮೇಲೆ ವಿಶ್ವಾಸವಿಟ್ಟಾಗ ಅದನ್ನು ಸಮರ್ಪಕವಾಗಿ ನಿಭಾಯಿಸುವ ಚಾಕಚಕ್ಯತೆ ಕೂಡ ಅವರಲ್ಲಿದೆ.- ತಳಮಟ್ಟದ ಕಾರ್ಯಕರ್ತರ ಬೆಂಬಲ, ನಂಬಿಕೆ ಮತ್ತು ಸ್ಥಳೀಯ ನಾಯಕರ ವಿಶ್ವಾಸ ಗಳಿಸಿಕೊಂಡು ಹೋಗುವ ಜನ ನಾಯಕ ವಿ. ಸೋಮಣ್ಣ. ಒಟ್ಟಿನಲ್ಲಿ ವಿ. ಸೋಮಣ್ಣನವರು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.