ಹಾವೇರಿ:- ಎರಡು ದಿನಗಳ ಹಿಂದೆ ಇಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ದೋಚಿಕೊಂಡು ಎಸ್ಕೇಪ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರ ಕರಾಮತ್ತು ಬಗೆದಷ್ಟು ಬಯಲಾಗುತ್ತಿದೆ.
ಗುರುವಾರ ಸಂಜೆ ಹಾವೇರಿಯಲ್ಲಿ ಈ ಘಟನೆ ನಡೆದಿತ್ತು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ ಅವರ ಮನೆ ಎದುರೇ ಈ ಘಟನೆ ನಡೆದಿರುವುದರಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಂತು ಅಕ್ಷರಶಃ ಸತ್ಯ.
ಉದ್ದಿಮೆದಾರ ಸಂತೋಷ ಈರಯ್ಯ ಹೀರೆಮಠ ಅವರಿಗೆ ಸೇರಿದ ಕಾರಿನಲ್ಲಿ ಕಳ್ಳರು ಈ ಕೈಚಳಕ ತೋರಿದ್ದು, ಜಸ್ಟ್ 53 ಸೆಕೆಂಡ್ ನಲ್ಲೇ ಬರೋಬ್ಬರಿ 33 ಲಕ್ಷ ರೂ ಕದ್ದು ಎಸ್ಕೇಪ್ ಆದ ಖದೀಮರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇವರು ಅಂತಿಂಥ ಚಾಲಾಕಿಗಳಲ್ಲ. ಮೊದಲಿಗೆ ಓರ್ವ, ಒಂಟಿಯಾಗಿ ಕಾರಿನ ಬಳಿ ಬಂದಿದ್ದಾನೆ. ಬಳಿಕ ಥಟ್ ಅಂತ ಕಾರಿನ ಸೈಡ್ ಗ್ಲಾಸ್ ಹೊಡೆದು ಒಳ ನುಗ್ಗಿದ್ದಾನೆ. ಅರ್ಧದೇಹ ಮಾತ್ರ ಕಾರಿನ ಒಳಗಡೆ ಹಾಕಿ, ಹಣ ಕದ್ದಿದ್ದಾನೆ. ಬಳಿಕ ಹಣ ಕೈಗೆ ಸೇರ್ತಿದ್ದಂತೆ,ಮತ್ತೋರ್ವ ಬಂದು ಪಿಕಪ್ ಮಾಡಿದ್ದಾನೆ. ಶಾಸಕರ ಮನೆ ಮುಂದಿದ್ದ ಕ್ಯಾಮರಾದಲ್ಲಿ ಇವೆಲ್ಲವೂ ಸೆರೆಯಾಗಿದೆ.
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಆಧರಿಸಿ ದರೋಡೆಕೋರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ತನಿಖೆ ಚುರುಕು ಮಾಡಿದ್ದಾರೆ.