ಹುಬ್ಬಳ್ಳಿ: ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನು ದೂಷಿಸುವುದೇ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಜೆಟ್ ಮಂಡನೆಗೂ ಮುನ್ನ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ನಡೆಯುವುದು ವಾಡಿಕೆ, ಆದರೆ ಈ ಬಾರಿ ಕೇಂದ್ರದ ಬಗ್ಗೆ ದೂರು ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವುದನ್ನು ನಿಲ್ಲಿಸಬೇಕೆಂದು ಹೇಳಿದ ಜೋಶಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬಡ್ಡಿ ರಹಿತ ಸಾಲ ನೀಡಿದೆ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ತಮ್ಮ ಕೊನೆಯ ಅವಧಿಯಲ್ಲಾದರೂ ಸತ್ಯ ಹೇಳಲಿ ಎಂದು ಟೀಕಿಸಿದ ಜೋಶಿ, ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಿದರು.
ಮುಸ್ಲಿಂ ಸಮುದಾಯಕ್ಕೆ ಮಾತ್ರ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸಿರುವುದನ್ನು ಪ್ರಶ್ನಿಸಿದ ಜೋಶಿ, ಇದೇನು ಪಾಕಿಸ್ತಾನಾನ ಎಂದು ಕಿಡಿಕಾರಿದರು. 159 ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ನೀಡಿರುವುದು, ಮದ್ರಸಾಗಳಿಗೆ ಹೆಚ್ಚಿನ ಹಣ ನೀಡಿ ಮೌಲ್ವಿಗಳನ್ನು ಸೃಷ್ಟಿಸುವ ಹುನ್ನಾರ ಎಂದು ಆರೋಪಿಸಿದರು.