ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತೆ ಕೊನೆಯ ಘಳಿಗೆಯಲ್ಲಿ ನಿದ್ರೆಗೆಟ್ಟು ಓದುವ ಬದಲಾಗಿ ಏನು ಮಾಡಬೇಕು ಎಂದು ನಿವೃತ್ತ ಹಿರಿಯ ಉಪನ್ಯಾಸಕ ಡಾ. ಅಮರೇಶ ಕೆ.ನಾಶಿ ಅವರು ಸಲಹೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. 1ನೇ ತರಗತಿಯಿಂದ 9ನೇ ತರಗತಿವರೆಗೆ ನಿಮಗೆ ಆಸಕ್ತಿ ಇರಲಿ, ಇಲ್ಲದಿರಲಿ ಅನಿವಾರ್ಯವಾಗಿ ಓದಬೇಕಾಗಿರುತ್ತದೆ. ಆದರೆ ಎಸ್‌ಎಸ್‌ಎಲ್‌ಸಿ ನಿಮ್ಮ ಗುರಿಯನ್ನು ನಿರ್ಣಯಿಸುವ ಹಂತ. ಇದು ನಿಮ್ಮ ವೃತ್ತಿ ಬದುಕಿನ ಬುನಾದಿಯಾಗಿದ್ದು, ಮುಂದೆ ಯಾವ ವೃತ್ತಿಪರ ಕೋರ್ಸ್ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕೆಂಬುದಕ್ಕೆ ಇದು ಪರ್ವಕಾಲ. ಹಾಗಾಗಿ ಪೋಷಕರು, ಶಿಕ್ಷಕರು, ನೆರೆಹೊರೆಯವರು ನಿಮ್ಮ ಬಗ್ಗೆ ನಿಮಗಿಂತ ಆಸಕ್ತಿ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೀವು ಪಡೆಯುವ ಅಂಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದಿದ್ದಾರೆ.
ಹಾಗೆಂದು, ಪರೀಕ್ಷೆ ಸನ್ನಿಹಿತವಾಗುತ್ತಿರುವ ಕಾಲದಲ್ಲಿ ಹೆಚ್ಚು ನಿದ್ರೆಗೆಟ್ಟು ಓದುವುದು ತರವಲ್ಲ. ನಿಮ್ಮ ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ನಿಮ್ಮ ತಯಾರಿಯನ್ನು ಸಾಬೀತುಪಡಿಸುತ್ತದೆ. ವಿಷಯವಾರು ಪತ್ರಿಕೆಯಲ್ಲಿ ನೀವು ಉತ್ತರಿಸುವಾಗ ಮಾಡಿದ ತಪ್ಪುಗಳಿಗೆ ನಿಮ್ಮ ಶಿಕ್ಷಕರು ನೀಡಿರುವ ಹಿಮ್ಮಾಹಿತಿಯು ನೀವು ಅಂತರ್ ಅವಲೋಕನ ಮಾಡಿಕೊಳ್ಳಲು ಸಾಧ್ಯವಾಗುವುದರೊಂದಿಗೆ ಮುಖ್ಯ ಪರೀಕ್ಷೆಗೆ ನಿಮ್ಮ ತಯಾರಿ ಹೇಗಿರಬೇಕೆಂಬುದಕ್ಕೆ ಕನ್ನಡಿಯಾಗುತ್ತದೆ.
ಪರೀಕ್ಷೆಯ ಹಿಂದಿನ ದಿನವೇ ಎಲ್ಲಾ ತಯಾರಿ ನಿಮ್ಮದಾಗಿರಲಿ. ಪೋಷಕರ ಕಾಳಜಿ ಬಗ್ಗೆ ಬೇಸರಿಸದಿರಿ. ನಗುತ್ತಲೇ ಪೂರ್ವಸಿದ್ಧತೆ ಮಾಡಿಕೊಳ್ಳಿ. ಪ್ರವೇಶಪತ್ರ ಹಾಗೂ ಪರೀಕ್ಷೆಗೆ ಬೇಕಾಗುವ ಎಲ್ಲಾ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಂಡಲ್ಲಿ ಮರುದಿನ ಪರೀಕ್ಷೆಗೆ ನಿರಾತಂಕವಾಗಿ ಹೋಗಿ ಬರಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.