ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರಸ್ತುತ ಸಾಲಿನಲ್ಲಿ ಸತತ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿಯಲ್ಲಿ ವಿಮಾ ಹಣ ತುಂಬಿದ ರೈತರಿಗೆ ಕಡಿಮೆ ಹಣ ಜಮಾ ಆಗಿರುವುದನ್ನು ಖಂಡಿಸಿ ಮುಳಗುಂದ ಹಸಿರು ಸೈನೆ ರೈತ ಸಂಘದ ಹಾಗೂ ಮುಳಗುಂದ ಸುತ್ತಮುತ್ತಲಿನ ಗ್ರಾಮದ ರೈತ ಸಂಘದ ಸದಸ್ಯರು ಮುಳಗುಂದ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಗದಗ ಕೃಷಿ ಜಂಟಿ ಅಧಿಕಾರಿ ತಾರಾಮಣಿ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಇದು ಮಧ್ಯಂತರ ಪರಿಹಾರವಲ್ಲ, ಸ್ಥಳ ನಿರ್ದಿಷ್ಟ ಪರಿಹಾರವಾಗಿದೆ. ಅತೀ ಹೆಚ್ಚು ಮಳೆಯಾಗಿ ಯಾರ ಜಮಿನಿನಲ್ಲಿ ಬೆಳೆ ಹಾನಿಯಾಗಿದೆಯೋ ಅಂತಹ ರೈತರು ಅರ್ಜಿ ಸಲ್ಲಿಸಿದ್ದರು. 49251 ಅರ್ಜಿಗಳು ಬಂದಿದ್ದು, ಈಗಾಗಲೇ 27.54 ಕೋಟಿ ರೂ ಹಣವನ್ನು ವಿಮಾ ಕಂಪನಿ ವಿತರಿಸಿದೆ. ಉಳಿದ ರೈತರ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದರು.
ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್. ಪಟ್ಟೇದ, ಕೃಷಿ ಅಧಿಕಾರಿ ಬಸವರಾಜೇಶ್ವರಿ, ಗುರಿಕಾರ, ರೈತ ಮುಖಂಡರಾದ ಕಿರಣ ಕುಲಕರ್ಣಿ, ದೇವಪ್ಪಾ ಅಣ್ಣಿಗೇರಿ, ಮುತ್ತಪ್ಪ ಪಲ್ಲೇದ, ಮುತ್ತಪ್ಪ ಬಳ್ಳಾರಿ, ಶಂಕ್ರಯ್ಯ ಹಿರೇಮಠ, ಗುಡುಸಾಬ ಗಾಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.