ವಿಜಯಸಾಕ್ಷಿ ಸುದ್ದಿ, ಗದಗ: ದೇಹವನ್ನು ಶುದ್ಧೀಕರಿಸುವಲ್ಲಿ ಉಪವಾಸ ಆಚರಣೆ ಸಹಕಾರಿಯಾಗಿದ್ದು, ಉಪವಾಸ ವೃತಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ವೈಜ್ಞಾನಿಕ ಮನೋಭಾವನೆ ಇದೆ. ಇಂದ್ರಿಯಗಳ ನಿಗ್ರಹಕ್ಕೆ ಉಪವಾಸ ಆಚರಣೆಯು ಪೂರಕವಾಗಿದ್ದು, ಮನೋನಿಯಂತ್ರಣಕ್ಕೆ ಉಪವಾಸ ಪ್ರೇರಣೆಯಾಗಿದೆ ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಅವರು ನರಸಾಪೂರದಲ್ಲಿ ಜರುಗಿದ ಮಹಿಳಾ ಇಪ್ತಿಯಾರ ಕೂಟದಲ್ಲಿ `ಉಪವಾಸ ಆಚರಣೆಯ ಮಹತ್ವ’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಪ್ರತಿಯೊಂದು ಧರ್ಮದಲ್ಲಿಯೂ ಜನರು ತಮ್ಮ ನಂಬಿಕೆ ಹಾಗೂ ಸಂಪ್ರದಾಯ-ಪದ್ಧತಿಗಳ ಅನುಸಾರವಾಗಿ ಉಪವಾಸ ವೃತಾಚರಣೆಯನ್ನು ಕೈಗೊಳ್ಳುತ್ತಾರೆ. ಇದು ಅನೇಕ ಖಾಯಿಲೆಗಳಿಗೆ ಸಂಜೀವಿನಿಯಾಗಿದೆ. ಉಪವಾಸ ಮಾಡುವಾಗ ಮನಸ್ಸಿನ ಸಂಯಮ ಅತ್ಯಗತ್ಯವಾಗಿದೆ ಎಂದರು.
ಅತಿಥಿ ಮಹಜಬೀನ್ ಮಕಾನದಾರ ಮಾತನಾಡಿ, ಉಪವಾಸವು ವ್ಯಕ್ತಿಯ ಮನಸ್ಸನ್ನು ಸದೃಢಗೊಳಿಸಿ ನಮ್ಮಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮಾನಸಿಕ ಸದೃಢತೆ, ಆರೋಗ್ಯ ಪರಿಪೂರ್ಣತೆ, ಉನ್ನತ ವಿಚಾರಗಳು-ಮೌಲ್ಯಗಳು ಉಪವಾಸ ಆಚರಣೆಯಿಂದ ಬೆಳೆದು ಬರುತ್ತವೆ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಲೀಮಾ ಬೇಗಂ ಕಲ್ಮನಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಆಪಾಜಾನ್ ತಾಳಿಕೋಟಿ, ಅನುಸೂಯಾ ಹೊಂಬಳ ಉಪಸ್ಥಿತರಿದ್ದರು.
ರೇಶ್ಮಾ ಕಲ್ಮನಿ ಹಾಗೂ ಆಫ್ರೀನ್ ಹಾವೇರಿ ಕುರಾನ್ ಪಠಿಸಿದರು. ಜಬೀನಾ ಹುಲಕೋಟಿ ಸ್ವಾಗತಿಸಿದರು. ಫಾತೀಮಾ ನದಾಫ್ ಪರಿಚಯಿಸಿದರು. ಹಮೀದಾ ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಆಫ್ರೀನ್ ಹರಿಹರ ವಂದಿಸಿದರು. ಕಾರ್ಯಕ್ರಮದಲ್ಲಿ ನಿರ್ಮಲಾ ಕರಿಗೌಡ್ರ, ಅಕ್ಕಮಹಾದೇವಿ ಮುಳಗುಂದಮಠ, ಆಫ್ರೀನ್ ಹೊಸಳ್ಳಿ, ಈರವ್ವ ದೊಡ್ಡಮನಿ, ಸುಮಾ ದಾಸರ, ಮೀನಾ ಜಳಕಿ, ಮಹಾಲಕ್ಷ್ಮಿ ರೆಡ್ಡಿ, ಗಿರಿಜವ್ವ ಜಾಲಿಹಾಳ, ಕವಿತಾ ಮಾದಗುಂಡಿ, ಪದ್ಮಾವತಿ ಸಿರಿಗೇರಿ, ಫಾತೀಮಾ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ತಾಹೀರಾಭಾನು ಶಿರಹಟ್ಟಿ ಮಾತನಾಡಿ, ಉಪವಾಸ ಆಚರಣೆಯ ಸಮಯದಲ್ಲಿ ಮನಸ್ಸು ನಿಗ್ರಹದಲ್ಲಿ ಇರಬೇಕು. ಲಘುವಾದ ಹಾಗೂ ಜೀರ್ಣಗೊಳ್ಳುವ ಸೂಕ್ಷ್ಮ ಆಹಾರ ಸೇವನೆ ಮಾಡಬೇಕು. ದೇವರಿಗಾಗಿಯೇ ಈ ಸಮಯವನ್ನು ಮೀಸಲಿಡುವುದಾಗಿದ್ದು, ಯಾವುದೇ ಕೆಟ್ಟ ಆಲೋಚನೆಗಳು ನಮ್ಮ ಮನಸ್ಸಿನಲ್ಲಿ ಸುಳಿಯದಂತೆ ನೋಡಿಕೊಳ್ಳಬೇಕು ಎಂದರು.