ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮೃತ ಯುವಕನಿಗಿತ್ತು ಏಡ್ಸ್ ಕಾಯಿಲೆ!

0
Spread the love

ಹಾಸನ:- ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Advertisement

ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪತ್ನಿ ಕುಟುಂಬಸ್ಥರು ಸ್ಪಷ್ಟನೆ ಕೊಟ್ಟಿದ್ದಾರೆ. ಮೃತ ಭರತ್ ಹೆಚ್‌ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಬಹಿರಂಗಪಡಿಸಿದ್ದಾರೆ. ಪತ್ನಿ ಕುಟುಂಬಸ್ಥರು ಭರತ್‌ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್‌ಐವಿ ಸೋಂಕಿತನಾಗಿದ್ದ. ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಭರತ್, ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಬಳಿಕ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟು ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದ.

ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ನನ್ನ ಪತ್ನಿ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದು ಭರತ್ ಸುಳ್ಳು ಆರೋಪ ಮಾಡಿದ್ದ. ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಕೂಡ ಪತ್ನಿಯನ್ನು ಉಳಿಸಿದ್ದ. ಭರತ್ ವಂಚನೆ ತಿಳಿಯದೇ ಮತ್ತೊಂದು ಪಂಚಾಯ್ತಿ ನಡೆಸಿ ಪತ್ನಿ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಭರತ್ ತನ್ನ ಪತ್ನಿ ತಪ್ಪು ಮಾಡದೇ ಇದ್ದರೂ ಮತ್ತೆ ತವರು ಮನೆಗೆ ಕಳುಹಿಸಿದ್ದ.

ಭರತ್ ಹೆಚ್‌ಐವಿ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಸದಾ ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅನುಮಾನ ಪಟ್ಟ ಪತ್ನಿ, ಭರತ್ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆಯ ಫೋಟೋ ತೆಗೆದು ತನ್ನ ಅಕ್ಕನಿಗೆ ಕಳುಹಿಸಿದ್ದಳು. ಆಕೆಯ ಸಹೋದರಿ ಮಾತ್ರೆಯ ಫೋಟೋಗಳನ್ನು ತನಗೆ ಪರಿಚಯ ಇರುವ ನರ್ಸ್‌ಗೆ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ನರ್ಸ್ ಇದು ಹೆಚ್‌ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ತಿಳಿಸಿದ್ದಾರೆ. ಇದರಿಂದ ಭರತ್ ಹೆಚ್‌ಐವಿ ಸೋಂಕಿತ ಎಂದು ಪತ್ನಿ ಕುಟುಂಬಸ್ಥರಿಗೆ ಗೊತ್ತಾಗಿದೆ.

ಹೀಗಾಗಿ ಪತ್ನಿ ತವರು ಮನೆ ಸೇರಿದ್ದಳು. ಎಲ್ಲದರಿಂದ ಮನ ನೊಂದಿದ್ದ ತಾಯಿ-ಮಗ ಸೂಸೈಡ್ ಮಾಡಿಕೊಂಡಿದ್ದಾರೆ. ಆದರೂ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here