ರೈತರು ಆತ್ಮಹತ್ಯೆಯಂತಹ ಕಾರ್ಯಕ್ಕೆ ಮುಂದಾಗದಿರಿ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರವಾದರೆ ದೇಶ ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ. ನೂರಕ್ಕೆ ಎಪ್ಪತ್ತರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಶ್ರಮದಿಂದ ಬೆವರು ಸುರಿಸಿ ದುಡಿದರೆ ಭೂತಾಯಿ ಕೈ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶ ಸಂರಕ್ಷಣೆಗಾಗಿ ಗಡಿ ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಯಾವತ್ತೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನರಸಿಂಹರಾಜಪುರ ತಾಲೂಕಾ ಪತ್ರಕರ್ತರ ಸಂಘದಿಂದ ಜರುಗಿದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ-ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭೂಮಿಯಲ್ಲಿ ಅದ್ಭುತ ಶಕ್ತಿಯಿದೆ. ಭೂ ತಾಯಿ ಮಡಿಲಿಗೆ ಹಿಡಿ ಕಾಳು ಹಾಕಿದರೆ ಖಂಡಗ ಕಾಳು ಕೊಡುತ್ತಾಳೆ. ಮಲೆನಾಡಿನ ಪ್ರಾಂತ್ಯದಲ್ಲಿ ಕಾಫಿ ಮತ್ತು ಅಡಿಕೆ ಬೆಳೆ ಮುಖ್ಯವಾದವುಗಳು. ಕೃಷಿ ಮಾಡುವ ರೈತ ಏನೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ರೈತರು ಕಷ್ಟ ಬಂದಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದರು.

ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ವೈವಿಧ್ಯಮಯವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ರೀ ರಂಭಾಪುರಿ ಜಗದ್ಗುರುಗಳ ದೂರ ದೃಷ್ಟಿಗೆ ಸಾಕ್ಷಿಯಾಗಿದೆ. ಕೃಷಿ ಮೇಳದಲ್ಲಿ ರೈತರು ಪಾಲ್ಗೊಂಡು ಹೆಚ್ಚಿನ ಜ್ಞಾನವನ್ನು ಪಡೆಯಲು ಮುಂದಾಗಬೇಕೆಂದರು.

ಎನ್.ಆರ್. ಪುರ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಬಿ.ಎಸ್. ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ-ಮಂಥನದ ಉದ್ದೇಶ ಹೊಂದಿ ಈ ಕೃಷಿ ಸಮ್ಮೇಳನ ಏರ್ಪಡಿಸಿದೆ. ಈ ಸಮಾರಂಭದ ಜೊತೆಗೆ ಮತ್ತೆರಡು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಮಾಜಿ ಸಚಿವ ಡಿ.ಎನ್. ಜೀವರಾಜ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವವೃಂದ, ಧರ್ಮರಾಜ ಹೊಂಕ್ರವಲ್ಲಿ, ಹೆಚ್.ಬಿ. ರಾಜಗೋಪಾಲ್, ರವಿಚಂದ್ರ, ಕೊರಟಗೆರೆ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ಹಾಗೂ ವೀರಭದ್ರಗೌಡ ಕೆ.ವಿ. ಕುಪ್ಪಗೋಡು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ತೆಂಡೆಕೆರೆ, ಧನಗೂರು, ಸಂಗೊಳ್ಳಿ, ಬೇರುಗಂಡಿ, ಅಚಲೇರಿ, ಹಂಪಸಾಗರ, ಕೆಂಭಾವಿ, ದೊಡ್ಡಸಗರ, ಸಿದ್ಧರಬೆಟ್ಟ, ಶ್ರೀಗಳು ಉಪಸ್ಥಿತರಿದ್ದರು.

ವನಮಾಲಾ ಮೃತ್ಯುಂಜಯ ಅಲ್ದೂರು ಸರ್ವರನ್ನು ಸ್ವಾಗತಿಸಿದರು. ಶಾಂತಾ ಆನಂದ ಪ್ರಾರ್ಥಿಸಿದರು. ಹೇಮಲತಾ ಶಿಕ್ಷಕರು ಬಿಕ್ಕೋಡು ಹಾಗೂ ಲೀಲಾವತಿ ಕೆ.ಎಸ್. ನಿರೂಪಿಸಿದರು. ಪ್ರವೀಣ ಬೆಳಗೊಳ ರೈತಗೀತೆ ಹಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ, ಕರ್ನಾಟಕ ಬಿ.ಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಾಂತಿ ಸಾಮಾನ್ಯವಾದುದಲ್ಲ. ಸಕಲ ಜೀವಾತ್ಮರನ್ನು ಉದ್ಧರಿಸಿದ ಮಹಾನ್ ಆಚಾರ್ಯ ಪುರುಷರು. ಅವರು ಕೊಟ್ಟ ತತ್ವ ಸಂದೇಶ, ಕಾಯಕ ಜೀವನದ ಹಿರಿಮೆ ನಮ್ಮೆಲ್ಲರ ಪ್ರಗತಿಗೆ ಅಡಿಪಾಯ. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೃಷಿ ಸಮ್ಮೇಳನ ಹಮ್ಮಿಕೊಂಡಿರುವುದು ಶ್ರೀ ರಂಭಾಪುರಿ ಪೀಠದ ರೈತ ಪರವಾದ ಕಳಕಳಿ ವೇದ್ಯವಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here