ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಬದುಕಿನ ಬಗ್ಗೆ ಸುದ್ದಿಯಾಗ್ತಿದ್ದಾರೆ. ಈಗಾಗಲೆ ಎರಡೆರಡು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿರುವ ಆಮೀರ್ ಇದೀಗ ೬೦ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಲು ರೆಡಿಯಾಗಿದ್ದಾರೆ. ಬೆಂಗಳೂರು ಮೂಲದ ಹುಡುಗಿಯೊಂದಿಗೆ ಆಮಿರ್ ಗೆ ಲವ್ ಆಗಿದ್ದು ಇದೀಗ ತಮ್ಮ ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ. ಅಂದ ಹಾಗೆ ಆಮಿರ್ ಖಾನ್ ಹೊಸ ಗರ್ಲ್ಫ್ರೆಂಡ್ ಹೆಸರು ಗೌರಿ.
ಆಮಿರ್ ಖಾನ್ ಮತ್ತು ಗೌರಿ ಹಲವು ತಿಂಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅದೀಗ ನಿಜವಾಗಿದೆ. ಗೌರಿ ಅವರಿಗೆ ಈಗಾಗಲೇ ಮದುವೆಯಾಗಿದ್ದು 6 ವರ್ಷದ ಮಗ ಕೂಡ ಇದ್ದಾನೆ. ಆಮಿರ್ ಖಾನ್ ಅವರ ಇಡೀ ಕುಟುಂಬದವರು ಗೌರಿಯನ್ನು ಭೇಟಿ ಆಗಿದ್ದಾರಂತೆ. ಗೌರಿ ಮತ್ತು ಆಮಿರ್ ಖಾನ್ ಜೊತೆಯಾಗಿ ಇರುವುದು ಅವರ ಕುಟುಂಬದವರಿಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಆಮಿರ್ ಖಾನ್ ಹಾಗೂ ಗೌರಿ ಅವರ ಪರಿಚಯ ಬರೋಬ್ಬರಿ 25 ವರ್ಷಗಳಷ್ಟು ಹಳೆಯದು. ಆದರೆ ಕೆಲವು ವರ್ಷಗಳು ಇಬ್ಬರು ಸಂಪರ್ಕದಲ್ಲಿ ಇರಲಿಲ್ಲ. ಕಿರಣ್ ರಾವ್ಗೆ ಡಿವೋರ್ಸ್ ನೀಡಿದ ನಂತರ ಗೌರಿ ಜೊತೆ ಆಮಿರ್ ಖಾನ್ ಆಪ್ತತೆ ಹೆಚ್ಚಿದೆ ಎನ್ನಲಾಗಿದೆ. ‘ನಾನು ಮತ್ತು ಗೌರಿ 25 ವರ್ಷಗಳ ಹಿಂದೆ ಪರಿಚಯ ಆಗಿದ್ದೆವು. ಈಗ ನಾವು ಬಾಳ ಸಂಗಾತಿಗಳು. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
‘ಸಿನಿಮಾ ನಿರ್ಮಾಣದ ವಿಭಾಗದಲ್ಲಿ ಗೌರಿ ಕೆಲಸ ಮಾಡುತ್ತಾರೆ. ಅವರಿಗಾಗಿ ನಾನು ಪ್ರತಿ ದಿನ ಹಾಡು ಹೇಳುತ್ತೇನೆ. 60ನೇ ವಯಸ್ಸಿನಲ್ಲಿ ನನಗೆ ಮದುವೆ ಸರಿ ಎನಿಸುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಮಕ್ಕಳಿಗೆ ಖುಷಿ ಆಗಿದೆ. ಮಾಜಿ ಪತ್ನಿಯರ ಜೊತೆ ಶ್ರೇಷ್ಠವಾದ ಬಾಂಧವ್ಯ ಹೊಂದಿದ್ದಕ್ಕೆ ನಾನು ಅದೃಷ್ಟವಂತ’ ಎಂದು ಆಮಿರ್ ಖಾನ್ ಹೇಳಿದ್ದಾರೆ.