HomeArt and Literatureದೂರದೃಷ್ಟಿಯ ದಿಟ್ಟ ನಾಯಕ ಕೆ.ಎಚ್. ಪಾಟೀಲ

ದೂರದೃಷ್ಟಿಯ ದಿಟ್ಟ ನಾಯಕ ಕೆ.ಎಚ್. ಪಾಟೀಲ

For Dai;y Updates Join Our whatsapp Group

Spread the love

`ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು’ ಎಂದು ಗದುಗಿನ ಹುಯಿಲಗೋಳ ನಾರಾಯಣರಾಯರು ಕನಸು ಕಂಡಂತೆ ಕನ್ನಡಾಂಬೆಯನ್ನು ಆಹ್ವಾನಿಸಿ ನಮ್ಮೆಲ್ಲರನ್ನು ಏಕೀಕರಣಕ್ಕಾಗಿ ಒಗ್ಗೂಡುವಂತೆ ಗಂಗಾಧರರಾವ್ ದೇಶಪಾಂಡೆ, ಆಲೂರು ವೆಂಕಟರಾವ್, ಹುಯಿಲಗೋಳ ನಾರಾಯಣರಾವ್, ಅಂದಾನಪ್ಪ ದೊಡ್ಡಮೇಟಿರವರಂತಹ ಅನೇಕ ಮಹನೀಯರು ಹೋರಾಡಿದ ಫಲಶ್ರುತಿಯಾಗಿ ಹರಿದು ಹಂಚಿಹೋಗಿದ್ದ ರಾಜ್ಯವು 1956ರಲ್ಲಿ ವಿಶಾಲ ಮೈಸೂರು ರಾಜ್ಯವಾಗಿ ಉದಯವಾಯಿತು.

ಅಂದಿನ ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯದಲ್ಲಿ ಮೈಸೂರು ಪ್ರಾಂತ್ಯ, ಕೊಡಗು ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹೈದರಾಬಾದ ಪ್ರಾಂತ್ಯ ಹಾಗೂ ಬಾಂಬೆ ಪ್ರಾಂತ್ಯದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸಲಾಯಿತು. ದೀನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು ಮತ್ತು ಶ್ರಮಿಕರ ಎಳೆಯ ಕುರಿತು ಅತೀವ ಕಾಳಜಿ ಹೊಂದಿದ್ದ ಹುಲಕೋಟಿಯ ಹುಲಿ, ನಾಡು ನುಡಿಯ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜಕೀಯ ಮುತ್ಸದ್ಧಿ, ಗಟ್ಟಿ ನಾಯಕತ್ವದ ಕೆ.ಎಚ್. ಪಾಟೀಲರ ಪ್ರಬಲವಾದ ಇಚ್ಛಾಶಕ್ತಿಯಂತೆ ಈ ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಲು ಇವರಿಂದ ಹಲವಾರು ಪ್ರಯತ್ನಗಳು ನಡೆದವು. ಈ ಮಹೋನ್ನತ ಕಾರ್ಯಕ್ಕಾಗಿ ಎಲ್ಲರ ಮನವೊಲಿಸಿ ಕರ್ನಾಟಕ ನಾಮಕರಣಕ್ಕೆ ದೂರದೃಷ್ಟಿಯ ಹೆಜ್ಜೆಗಳನಿಟ್ಟ ದಿಟ್ಟ ನಾಯಕರು ಕೆ.ಎಚ್. ಪಾಟೀಲರು.

ಕೆ.ಎಚ್. ಪಾಟೀಲರು ಸಚಿವರು ಮತ್ತು ಶಾಸಕರಾಗಿ ಇರದ ಸಂದರ್ಭದಲ್ಲಿಯೂ ಅವರ ಕರ್ತೃತ್ವ ಶಕ್ತಿಯಿಂದ ಕರ್ನಾಟಕ ನಾಮಕರಣಕ್ಕೆ ಪೂರಕವಾಗಿ ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ 27, 28 ಮತ್ತು 29ರ ಡಿಸೆಂಬರ 1961ರಲ್ಲಿ ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೆ.ಜಿ. ಕುಂದಣಗಾರರ ಸರ್ವಾಧ್ಯಕ್ಷತೆಯಲ್ಲಿ ಜರುಗಿತು. ಈ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ಎಚ್. ಪಾಟೀಲರವರ ಆಶಯದಂತೆ ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದು, ವಿಶಾಲ ಮೈಸೂರು ರಾಜ್ಯಕ್ಕೆ ಮುಂದೆ ಕರ್ನಾಟಕವೆಂದು ಹೆಸರು ಪಡೆಯಲಿ ಎಂಬ ಕೂಗು ಈ ಸಮ್ಮೇಳನದಲ್ಲಿ ಕೈಗೊಂಡ ಆ ಒಂದು ನಿರ್ಣಯ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸಿ ಒತ್ತಡವನ್ನು ಹೆಚ್ಚಿಸಿತು.

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಅಂತಿಮವಾಗಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸುರವರು ಮೈಸೂರು ಭಾಗ ಪ್ರತಿನಿಧಿಸುವ ಮುಖ್ಯಮಂತ್ರಿಯಾಗಿದ್ದರೂ ಮೈಸೂರು ಎಂಬ ಹೆಸರಿನ ಬದಲಿಗೆ ಕರ್ನಾಟಕ ಎಂಬ ಹೆಸರು ನಾಮಕರಣವಾಗುವುದಕ್ಕೆ ಹೃದಯವೈಶಾಲ್ಯತೆ ಮೆರೆದು ಕರ್ನಾಟಕ ರಾಜ್ಯ ಎಂಬುದಕ್ಕೆ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ನುಡಿದದ್ದಕ್ಕೆ ಕಟಿಬದ್ಧರಾಗಿದ್ದರು. ಸರ್ವ ಸದಸ್ಯರ ಬೆಂಬಲದಿಂದ ನಿರ್ಣಯ ಅಂತಿಮವಾಗಿ ಅಂಗೀಕರಿಸಲ್ಪಟ್ಟಿತು.

ಅಂದಿನ ರಾಷ್ಟ್ರಪತಿಗಳಾದ ವಿ.ವಿ. ಗಿರಿಯವರು 08-10-1973ರಂದು ತಮ್ಮ ಅಧಿಕೃತ ಒಪ್ಪಿಗೆ ನೀಡುವುದರೊಂದಿಗೆ ಮೈಸೂರು ರಾಜ್ಯವು ಕರ್ನಾಟಕ ಎಂಬ ಹೆಸರನ್ನು ಪಡೆದುಕೊಂಡಿತು. 2-11-1973ರಂದು ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಕರ್ನಾಟಕ ನಾಮಕರಣೋತ್ಸವ ಹಬ್ಬದಂತೆ ಆಚರಿಸಲಾಯಿತು. ತಾಯಿ ಭುವನೇಶ್ವರಿ ಸನ್ನಿಧಿಯಲ್ಲಿ ಮಂಗಳಾಚರಣೆ ಮಾಡಿ ಕಲಾವಿದರು, ಬುದ್ಧಿ ಜೀವಿಗಳು, ಕನ್ನಡ ಪ್ರೇಮಿಗಳೆಲ್ಲ ಸಂಭ್ರಮಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ದೇವರಾಜ ಅರಸ, ಜಯಚಾಮರಾಜೇಂದ್ರ ಒಡೆಯರ, ಕೆ.ಎಚ್. ಪಾಟೀಲ, ಕೆ.ಎಫ್. ಪಾಟೀಲರ ಉಪಸ್ಥಿತಿಯಲ್ಲಿ ಹಂಪಿ ಆದಿದೇವ ವಿರೂಪಾಕ್ಷ ದೇವಸ್ಥಾನದಿಂದ ಮೆರವಣಿಗೆ ಮೂಲಕ ಗದುಗಿನ ಆದಿದೇವ ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ಜ್ಯೋತಿ ತರಲಾಯಿತು.

ದಿ. ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸಾಯಿಟಿ ಆವರಣದಲ್ಲಿ 1961ರಲ್ಲಿ ಕರ್ನಾಟಕ ನಾಮಕರಣಕ್ಕೆ ಒತ್ತಾಯಿಸಿ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾದ ಅದೇ ಪ್ರಾಂಗಣದಲ್ಲಿ 17 ವರ್ಷಗಳ ನಂತರ ಕರ್ನಾಟಕ ನಾಮಕರಣೋತ್ಸವ ವೈಭವದಿಂದ ನೆರವೇರಿದ್ದು ವಿಶೇಷವಾಗಿದ್ದಿತ್ತು. 1961 ರಲ್ಲಿ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕರ್ನಾಟಕ ನಾಮಕರಣಕ್ಕೆ ಒತ್ತಾಯಿಸಿದ ಕೆ.ಎಚ್. ಪಾಟೀಲರು 03-11-1973ರಂದು ನಡೆದ ಭವ್ಯ ಕಾರ್ಯಕ್ರಮದಲ್ಲಿ ಕೃಷಿ, ಅರಣ್ಯ ಸಚಿವರಾಗಿ ಕರ್ನಾಟಕ ನಾಮಕರಣದ ಕನಸು ನನಸಾಗಿಸಿದ್ದರು. ಈ ಕರ್ನಾಟಕ ನಾಮಕರಣೋತ್ಸವದಿಂದ ಕರ್ನಾಟಕ ಚರಿತ್ರೆಯ ಪುಟಗಳಲ್ಲಿ ಕೆ.ಎಚ್. ಪಾಟೀಲರವರು ಅಜರಾಮರವಾಗಿ ಕನ್ನಡಿಗರ ಮನ ಗೆದ್ದರು.

ದೊಡ್ಡ ವ್ಯಕ್ತಿಯಾಗಲು ಸಣ್ಣದಾರಿ, ಕಾಲುದಾರಿ, ಒಳದಾರಿ, ಅಡ್ಡದಾರಿ ಯಾವುವು ಇಲ್ಲ. ದೊಡ್ಡವರಾಗಲು ಇರುವುದು ಒಂದೇ ಹೆದ್ದಾರಿ. ನಿರಂತರ ದುಡಿಮೆ. ದಣಿವರಿಯದ ಉದಾತ್ತ ಕಾಯಕ. ಸೋಲರಿಯದ ಶ್ರದ್ಧಾನ್ವಿತ ಸಾಹಸ, ಪ್ರಾಮಾಣಿಕ ಪ್ರಯತ್ನಗಳ ಖುಜಮಾರ್ಗ, ಉನ್ನತ ಆದರ್ಶ ಇಂಥ ರಾಜಪಥವನ್ನು ಆರಿಸಿಕೊಂಡು ಯಶಸ್ಸಿನ ಗುರಿ ಮುಟ್ಟಿ ರಾಜಕೀಯ ರಂಗದಲ್ಲಿ ಅಜರಾಮರಾಗಿ ಬೆಳೆದು ನಿಂತು ಕರ್ನಾಟಕದ ಚರಿತ್ರೆಯಲ್ಲಿ ಅಮರರಾಗಿ ತಮ್ಮ ವಿಶಿಷ್ಟ ಕಾರ್ಯ ಸಾಧನೆಗಳ ಮೂಲಕ ಜನರ ಮನ ಗೆದ್ದ ರಾಜಕೀಯ ಧುರೀಣ ಕೆ.ಎಚ್. ಪಾಟೀಲರು.

1973 ನವೆಂಬರ್ 01, 02, ಮತ್ತು 03 ರಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವದ ಘಟನೆಗಳನ್ನು ಮರುಸೃಷ್ಟಿಸಿ ಕರ್ನಾಟಕ ಸಂಭ್ರಮ-50ರ ಸಂಭ್ರಮಾಚರಣೆಯ ಗತವೈಭವ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ನಾಡಿನ ಜನತೆ ಸಾಕ್ಷಿಯಾಗುವಂತೆ ಮಾಡಿದ್ದು ಸರಳ ಸಜ್ಜನಿಕೆಯ, ಸಚಿವರಾದ ಎಚ್.ಕೆ. ಪಾಟೀಲರು. ಇಂದಿಗೂ ಅಂದು ನಡೆದ ಕರ್ನಾಟಕ ಸಂಭ್ರಮದ ಸಂಭ್ರಮಾಚರಣೆಯ ಸಮಾರಂಭವನ್ನು ಕನ್ನಡ ನಾಡು ನುಡಿಯ ಅಭಿಮಾನ ಬೆಳೆಸಲು ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಔಚಿತ್ಯಪೂರ್ಣವಾಗಿದೆ.

– ಡಾ. ಶರಣು ಗೋಗೇರಿ.

ಆಯುಕ್ತರು, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗದಗ.

ಈ ಸಂದರ್ಭದಲ್ಲಿ ಕರ್ನಾಟಕ ನಾಮಕರಣ ಮಹೋತ್ಸವದ ಕರ್ನಾಟಕ ಸ್ತಂಭ ಅನಾವರಣ, ಕರ್ನಾಟಕ ನಾಮಕರಣ ಮಹೋತವದ ಘಟನಾವಳಿಗಳ ಛಾಯಾಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ, ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಗದುಗಿನ ಜನರ ಮನದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿ ಹಲವಾರು ವರ್ಷಗಳವರೆಗೆ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಿದವರು ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!