ವಿಜಯಸಾಕ್ಷಿ ಸುದ್ದಿ, ಗದಗ: ಮುಸ್ಲಿಮರಾಗಿರಬಹುದು, ಕ್ರಿಶ್ಚಿಯನ್, ಸಿಕ್ಕರು, ಬೌದ್ಧರು ಕೂಡ ಈ ದೇಶದ ಪ್ರಜೆಗಳು. ನಾವು ಎಲ್ಲ ಹಿಂದುಳಿದ, ಅಲ್ಪಸಂಖ್ಯಾತರ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಭಾನುವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕೆ.ಎಚ್. ಪಾಟೀಲ್ ಜನ್ಮ ಶತಮಾನೋತ್ಸವ ಹಾಗೂ ಕಾಟನ್ ಸೇಲ್ ಸೊಸೈಟಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ನಚಿತರ ಮಾಧ್ಯಮದವರೊಂದಿಗೆ ಮಾತನಾಡಿ, ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ವಿಷಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ ಅವರು ತಿರುಗೇಟು ನೀಡಿದರು.
ಬಿ.ವೈ. ವಿಜಯೇಂದ್ರ ಕುವೆಂಪು ಅವರ ನಾಡಗೀತೆಯನ್ನು ಒಮ್ಮೆ ಓದಲಿ. ಅಲ್ಪಸಂಖ್ಯಾತರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಇಬ್ಬರು ಕ್ರಿಶ್ಚಿಯನ್ನರು, ಮೂವರು ಮುಸ್ಲಿಮರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಿ. ಆಗ ಸಮಬಾಳು, ಸಮಪಾಲು ಎಂದು ಮಾತನಾಡುವುದಕ್ಕೆ ವಿಜಯೇಂದ್ರ ಅವರಿಗೆ ಅವಕಾಶವಿದೆ ಎಂದು ಲೇವಡಿ ಮಾಡಿದರು.
ಬಿ.ವೈ. ವಿಜಯೇಂದ್ರರು ಈಗಷ್ಟೇ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಜಾಸ್ತಿ ತಲೆ ಕೆಡಿಸಿಕೊಂಡರೆ ಏನೂ ಪ್ರಯೋಜನವಿಲ್ಲ ಎಂದರು. ಮೀಸಲಾತಿ ವಿಷಯವಾಗಿ ಕೇಂದ್ರ ಸಚಿವ ಜಯಶಂಕರ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಅವರ ಮಾತನ್ನು ನಾನು ಕೇಳಿಲ್ಲ. ಕೇಳಿದ ನಂತರ ಉತ್ತರ ಕೊಡುತ್ತೇನೆ ಎಂದಷ್ಟೇ ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಉಪಸ್ಥಿತರಿದ್ದರು.



