ಕಲಬುರಗಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತ ಕಾಣುತ್ತೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ. ಇಂತಹದೊಂದು ಘಟನೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ನಡೆದಿದೆ.
ಹೌದು ಪೊಲೀಸ್ ಠಾಣೆಯಲ್ಲಿ ನಿಶ್ಚಿಂತೆಯಿಂದ ರಾಜಾರೋಷವಾಗಿ ಇಸ್ಪೀಟ್ ಆಟವಾಡುತ್ತಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಮೇಲಾಧಿಕಾರಿಗಳ ಅಂಜಿಕೆ-ಅಳುಕು ಇಲ್ಲದೆ ನಿರ್ಭಯವಾಗಿ ಇಸ್ಪೀಟ್ ಆಟವಾಡಿರುವುದು ಬೆಳಕಿಗೆ ಬಂದಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಠಾಣೆಯೊಳಗೆ ಜೂಜಾಟದಲ್ಲಿ ತೊಡಗಿದ್ದ ಎಎಸ್‌ಐ ಮಹಿಮೂದ್ ಮಿಯಾ, ಹೆಡ್ ಕಾನ್ಸ್‌ಟೇಬಲ್‌ಗಳಾದ ನಾಗರಾಜ್, ಸಾಯಿಬಣ್ಣಾ, ಇಮಾಮ್, ನಾಗಭೂಷಣ್ ಅವರನ್ನ ಅಮಾನತುಗೊಳಿಸಿ ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಜೊತೆಗೆ ವಾಡಿ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ಕಾರಣ ನೀಡುವಂತೆ ಎಸ್‌ಪಿ ಕೇಳಿದ್ದಾರೆ ಎನ್ನಲಾಗಿದೆ.