ಸಮಾಜವೇ ಮೆಚ್ಚುವಂತಹ ಕಾರ್ಯ ಮಾಡುತ್ತಿದ್ದಾನೆ ಈ ರೌಡಿ ಶೀಟರ್!

Vijayasakshi (Gadag News) :


ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿದೆ. ಹೀಗಾಗಿ ಜಗತ್ತಿನ ಬಹುತೇಕ ಆಸ್ಪತ್ರೆಗಳು ರೋಗಿಗಳ ಪ್ರಾಣ ಉಳಿಸಿ ಕೊಳ್ಳಲು ಸತತ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಸೊಂಕಿತರನ್ನು ಕರೆತರಲು ಅಂಬ್ಯುಲೆನ್ಸ್ ಗಳೂ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೆಲೆಬ್ರಿಟಿಗಳು, ಸಂಘ – ಸಂಸ್ಥೆಗಳು ಹಾಗೂ ಹಲವು ಶ್ರೀಮಂತರು ಜನ ಸೇವೆಗೆ ಮುಂದಾಗಿದ್ದಾರೆ. ಇವರೆಲ್ಲರ ಮಧ್ಯೆ ಇಲ್ಲೊಬ್ಬ ರೌಡಿ ಶಿಟರ್ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಸಲ್ಲಿಸುತ್ತಿದ್ದಾ‌ನೆ.

ಇಲ್ಲಿಯ ಗಣೇಶ ಪೇಟೆ ನಿವಾಸಿ ಇರ್ಷಾದ್ ಬಳ್ಳಾರಿ ಉರ್ಫ್ ಬಲ್ಲಾಶೆಟ್ ಎಂಬ ವ್ಯಕ್ತಿಯು ಸ್ವಯಂ ಆಂಬುಲೆನ್ಸ್ ವಾಹನವನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ನೀಡಿದ್ದಾನೆ. ಅಷ್ಟೇ ಅಲ್ಲ, ಸ್ವತಃ ತಾನೇ ಚಾಲನೆ ಮಾಡುವ ಮೂಲಕ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಕೊರೊನಾದಿಂದ ಮೃತಪಟ್ಟಿರುವ ಮೃತ ದೇಹಗಳನ್ನು ಸಹ ಸಾವಿನ ಹಂಗು ತೊರೆದು ಅಂತ್ಯಕ್ರಿಯೆಗೆ ಕೊಂಡೊಯ್ಯುವುದು ಮಾತ್ರವಲ್ಲದೆ ಬಲ್ಲಾ ಶೇಟ್ ಕೋವಿಡ್ ರೋಗಿಗಳ ಚಿಕಿತ್ಸೆಗೂ ಉಚಿತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾನೆ.

ಈ ಕಾರ್ಯದಿಂದಾಗಿ ಈ ವ್ಯಕ್ತಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ರೌಡಿ ಶಿಟರ್ ಗಳೆಂದರೆ ಒಂದು ಏರಿಯಾದಿಂದ ಮತ್ತೊಂದು ಎರಿಯಾಗೆ ಹೋಗಲು ತನ್ನದೆ ಆದ ಬೆಂಬಲಿಗರನ್ನು ಜೊತೆಗೆ ಇಟ್ಟು ತಿರುಗಾಡುವ ಖಯಾಲಿ ಹೊಂದಿರುತ್ತಾರೆ. ಆದರೆ, ಮನ ಪರಿವರ್ತನೆ ಗಾಗಿ ಕಳೆದ ವರ್ಷದ ಕೋವಿಡ್ -19 ಸಂದರ್ಭದಲ್ಲಿಯೇ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಈ ವ್ಯಕ್ತಿ, ರೋಗದ ವಿರುದ್ಧ ಹೋರಾಟ ನಡೆಸಿ ಸಮಾಜದ ಮೆಚ್ಚುಗೆ ಪಾತ್ರವಾಗಿದ್ದಾನೆ.
ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಸಾಕು, ಕೆಲವೇ ಕ್ಷಣದಲ್ಲಿ ಆಂಬುಲೆನ್ಸ್ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದಾನೆ.

ಹುಬ್ಬಳ್ಳಿಯ ಯಾವುದೇ ಆಸ್ಪತ್ರೆಯಿಂದ ಕರೆ ಮಾಡಿದರೂ ಇರ್ಷಾದ್ ಸಾರ್ವಜನಿಕ ಸೇವೆಗೆ ಬರುತ್ತಾನೆ. ಅಲ್ಲದೇ, ದಿನದ 24 ಗಂಟೆಯು ಹಗಲು ರಾತ್ರಿ ತನ್ನ ಪರಿವಾರವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾನೆ. ಜಾತಿ, ಧರ್ಮ ಬೇಧ ಮರೆತು ಯಾರೇ ಸಹಾಯಕ್ಕೆ ಕರೆದರೂ ಹೋಗುವುದು ಇತನ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತಿದೆ.
ಒಟ್ಟಿನಲ್ಲಿ ಇರ್ಷಾದ್ ಬಳ್ಳಾರಿ ಅವರ ಕಾರ್ಯ ಇನ್ನೂ ಹೆಚ್ಚು ಹೆಚ್ಚು ವ್ಯಾಪಿಸಲಿ. ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಇವರ ಸಮಾಜ ಸೇವೆ ಇನ್ನುಳಿದ ರೌಡಿಗಳಲ್ಲಿಯೂ ಬದಲಾವಣೆ ತರಲಿ ಎಂಬುವುದು ಎಲ್ಲರ ಆಶಯ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.