ಬಸಾಪುರ ಕೆರೆಗೆ ತುಂಬಲಿದೆ ಜೀವಜಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಮಾಜಿಕ ಸ್ಮಧಾರಣೆಯ ಕಳಕಳಿ ಹೊಂದಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಕನಸಿನ ಯೋಜನೆಯಾದ `ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಲಕ್ಷ್ಮೇಶ್ವರ ತಾಲೂಕಿನ ಬಸಾಪುರ ಗ್ರಾಮದ ಕೆರೆಯನ್ನು ಆಯ್ಕೆ ಮಾಡಿ ಕೆರೆ ಹೂಳೆತ್ತುವ ಕಾರ್ಯ ಅತ್ಯಂತ ಭರದಿಂದ ಸಾಗಿದೆ.

Advertisement

8 ವರ್ಷಗಳ ಹಿಂದೆ ಪೂಜ್ಯರು ಬರಗಾಲದ ಸಂದರ್ಭದಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ಶಾಶ್ವತ ನೀರಿನ ವ್ಯವಸ್ಥೆಯನ್ನೇ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ನಿರ್ಲಕ್ಷಕ್ಕೊಳಗಾಗಿರುವ ಕೆರೆಗಳ ಅಭಿವೃದ್ಧಿಗೊಳಿಸುವ ಕಾರ್ಯ ಆರಂಭಿಸಿ, ಇಲ್ಲಿವರೆಗೂ ರಾಜ್ಯದಲ್ಲಿ 850ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.

ಇದೀಗ ಬಸಾಪುರ ಗ್ರಾಮದ 6 ಎಕರೆ 30 ಗುಂಟೆ ವಿಸ್ತೀರ್ಣದ ಕೆರೆಯ ಹೂಳೆತ್ತುವ ಕಾರ್ಯ 6 ಲಕ್ಷ 60 ಸಾವಿರ ರೂ ಮೊತ್ತದ ಕಾರ್ಯ ಕಳೆದ 15 ದಿನಗಳಿಂದ ಭರದಿಂದ ಸಾಗಿದೆ. ಕೆರೆಯಲ್ಲಿ ಹಿಟಾಚಿ, ಟ್ರ್ಯಾಕ್ಟರ್ ಮತ್ತು ಟಿಪ್ಪರ್‌ಗಳ ಭರಾಟೆಯ ಸದ್ದು ಕೇಳುತ್ತಿದೆ. ಸರದಿಯಂತೆ ರೈತರು ತಮ್ಮ ಹೊಲಗದ್ದೆಗಳಿಗೆ ಕೆರೆಯ ಮಣ್ಣನ್ನು ಸಾಗಿಸಿ ಹೊಲಗಳ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಿತ್ಯ 2 ಹಿಟ್ಯಾಚಿ ಮೂಲಕ ನೂರಾರು ಟ್ರ್ಯಾಕ್ಟರ್ ಮತ್ತು ಟಿಪ್ಪರ್‌ಗಳಲ್ಲಿ ಲಕ್ಷ್ಮೇಶ್ವರ, ರಾಮಗೇರಿ, ಹರ್ಲಾಪುರ, ಪಶುಪತಿಹಾಳ, ಯರೇಬೂದಿಹಾಳ, ಶಿಗ್ಲಿ, ಅಡರಕಟ್ಟಿ ಭಾಗದಿಂದ ರೈತರು ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದುವರೆಗೂ 5 ಸಾವಿರ ಟ್ರ್ಯಾಕ್ಟರ್ ಫಲವತ್ತಾದ ಮಣ್ಣನ್ನು ರೈತರು ತೆಗೆದುಕೊಂಡು ಹೋಗಿದ್ದು, ಇನ್ನೂ 8/10 ದಿನ ಈ ಕಾರ್ಯ ನಡೆಯಲಿದೆ.

25 ವರ್ಷಗಳಿಂದ ಹೂಳೆತ್ತದ ಕೆರೆಯ ಹೂಳನ್ನು ಈ ವರ್ಷ ತೆಗೆಯುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಹಿರಿಯರ ಕಾಲದಿಂದಲೂ ಈ ಕೆರೆಯ ನೀರನ್ನೇ ಕುಡಿಯಲು ಬಳಸುತ್ತಿದ್ದು, ಕೆರೆಯ ನೀರೇ ಜೀವನಾಧಾರವಾಗಿದೆ. ನಮ್ಮೂರ ಕೆರೆ ನಮ್ಮ ಹೆಮ್ಮೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

 

ಕೆರೆಯಲ್ಲಿ ಹೂಳು ತುಂಬಿದ್ದರಿಂದ ಕಳೆದ 2 ವರ್ಷಗಳಿಂದ ನೀರಿಲ್ಲದೇ ಸಾಕಷ್ಟು ನೀರಿನ ಸಮಸ್ಯೆ ಅನುಭವಿಸಿದ್ದೇವೆ. ಕೆರೆ ಅಭಿವೃದ್ಧಿಗೆ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಹೂಳೆತ್ತುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ-ಸಂಭ್ರಮವನ್ನುಂಟುಮಾಡಿದೆ. ನಮ್ಮೂರ ಕೆರೆಯಲ್ಲಿ ನೀರಿದ್ದರೆ ಇಡೀ ಗ್ರಾಮದ ಜನರು, ಜಾನುವಾರುಗಳಿಗೆ ಅನಕೂಲವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಋಣಿಯಾಗಿದ್ದೇವೆ ಮತ್ತು ಕೆರೆಯನ್ನು ಅತ್ಯಂತ ಕಾಳಜಿಯಿಂದ ಸಂರಕ್ಷಣೆ ಮಾಡಿಕೊಳ್ಳುತ್ತೇವೆ.

– ಅಶೋಕ ತುಂಬಣ್ಣವರ.

ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ.

 

ಹೂಳೆತ್ತುವ ಕಾರ್ಯಕ್ಕೆ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಅತ್ಯಂತ ಫಲವತ್ತಾದ ಈ ಮಣ್ಣನ್ನು ಹೊಲಗಳಿಗೆ ಹಾಕಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಕೆರೆಯಲ್ಲಿ ಬೆಳಗಿನಿಂದ ಸಂಜೆವರೆಗೆ ಮಣ್ಣು ಎತ್ತಿ ಹಾಕಲು ಹಿಟಾಚಿ ವ್ಯವಸ್ಥೆ ಮಾಡಲಾಗಿದೆ. ಕೆರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೆ ಸುತ್ತಲಿನ ರೈತರ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಜನ ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಇದರಿಂದ ಜೀವಜಲ ಲಭಿಸುತ್ತದೆ.

– ಪುನೀತ ಓಲೆಕಾರ.

ಶ್ರೀ ಧ.ಗ್ರಾ ಕ್ಷೇತ್ರ ಯೋಜನಾಧಿಕಾರಿ.


Spread the love

LEAVE A REPLY

Please enter your comment!
Please enter your name here