ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಮೂರು ದಿನಗಳ ಕಾಲ ಪೇಠೆ ರಸ್ತೆಯಲ್ಲಿರುವ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ದಿಂಡಿ ಉತ್ಸವವನ್ನು ಗುರುವಾರದಿಂದ ಪ್ರಾರಂಭಿಸಿದ್ದು, ಪೋತಿ ಸ್ಥಾಪನೆ, ಗುಲಾ ಕೀರ್ತನೆ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ಎರಡನೇ ದಿನವಾದ ಶುಕ್ರವಾರ ನಸುಕಿನ 5 ಗಂಟೆಗೆ ಕಾಕಡಾರತಿ ಜರುಗಿ ನಂತರ 7 ಗಂಟೆಯಿಂದ 10 ಗಂಟೆಯವರೆಗೆ ದೇವಸ್ಥಾನದ ಆವರಣದಲ್ಲಿ ಶ್ರೀ ಜ್ಞಾನೇಶ್ವರಿ ಗ್ರಂಥದ 9 ಮತ್ತು 12ನೇ ಅಧ್ಯಾಯದ ಪಾರಾಯಣ ಮಾಡಿದರು. ಸಂಜೆ 7 ಗಂಟೆಗೆ ಕೀರ್ತನೆ, ರಾತ್ರಿ 10 ಗಂಟೆಗೆ ಸ್ಥಳೀಯ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಸಾಂಪ್ರದಾಯಕ ಬಾರೂಡ ಕಾರ್ಯಕ್ರಮ ನಡೆದವು. ಭಾವಸಾರ ಕ್ಷತ್ರಿಯ ಸಮಾಜ, ಶ್ರೀ ಸಂತ ಜ್ಞಾನೇಶ್ವರ ಯುವಕ ಮಂಡಳ, ಹಿಂಗೂಲಾಂಬಿಕಾ ಮಹಿಳಾ ಮಂಡಳಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮೂರನೇ ದಿನವಾದ ಶನಿವಾರ ಫಾಲ್ಗುಣ ಬಹುಳ ಅಷ್ಟಮಿಯಂದು ಮುಂಜಾನೆ ಕಾಕಡಾರತಿ, ವಿಶೇಷ ಪೂಜೆ ಅಲಂಕಾರ, ನಂತರ 10 ಗಂಟೆಗೆ ಪಲ್ಲಕ್ಕಿ ಸಮೇತ ನಗರ ಪ್ರದಕ್ಷಿಣೆ, ಮಂಗಳಾರತಿ, ನಂತರ ಮಹಾಪ್ರಸಾದ ಜರುಗಲಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಕಿರಣ ನವಲೆ, ಕಾರ್ಯದರ್ಶಿ ವೆಂಕಟೇಶ ಮಾತಾಡೆ ತಿಳಿಸಿದ್ದಾರೆ.