ಮುಸ್ಲಿಂ ಮೀಸಲಾತಿಯನ್ನು ಬಾಬಾ ಸಾಹೇಬ್‌ ಅಂಬೇಡ್ಕರರೇ ವಿರೋಧಿಸಿದ್ದರು: ಆರ್‌.ಅಶೋಕ್

0
Spread the love

ಬೆಂಗಳೂರು: ಈ ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಪ್ರತಿಭಟನೆ ಮಾಡಿರುವುದಕ್ಕೆ ಶಾಸಕರನ್ನೇ ಅಮಾನತು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಪುಸ್ತಕದಲ್ಲಿ ಬಹಳ ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಹೊಗಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ ಇಡಲಿದ್ದೇವೆ. ಜನರ ನ್ಯಾಯಾಲಯದಲ್ಲಿ ಸರ್ಕಾರದ ಬಗ್ಗೆ ಜನರೇ ತೀರ್ಮಾನ ಮಾಡಲಿದ್ದಾರೆ ಎಂದರು.

ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ ವೀಲ್‌ ಚೇರ್‌ನಲ್ಲಿದ್ದರೆ, ಸರ್ಕಾರ ಇನ್ನೂ ತೆವಳುತ್ತಿದೆ. 18 ಶಾಸಕರನ್ನು ಸ್ಪೀಕರ್‌ ಯು.ಟಿ.ಖಾದರ್‌ ಅಮಾನತು ಮಾಡಿದ್ದಾರೆ. ಮಾನಗೇಡಿ ಕಾಂಗ್ರೆಸ್‌ನವರು ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಎಸ್‌.ಎಲ್‌.ಧರ್ಮೇಗೌಡ ಅವರನ್ನು ಎಳೆದು ಅಪಮಾನ ಮಾಡಿದ್ದರು.

ಆದರೂ ಬಿಜೆಪಿ ಧರಣಿ ಮಾಡಿದ್ದೇ ತಪ್ಪು ಎನ್ನುತ್ತಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಕ್ಕೆ ಬಿಜೆಪಿ ಪ್ರತಿಭಟಿಸಿದೆ. ಕಾಂಗ್ರೆಸ್‌ ಚಿತಾವಣೆಯಿಂದ ಸ್ಪೀಕರ್‌ ಯು.ಟಿ.ಖಾದರ್‌ ಅಮಾನತು ಮಾಡಿದ್ದಾರೆ. ಹಿಂದಿನ ಯಾವುದೇ ಸ್ಪೀಕರ್‌ ಈ ರೀತಿ ದೀರ್ಘಾವಧಿಯ ಅಮಾನತು ಮಾಡಿಲ್ಲ ಎಂದರು.

ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಮ್‌ ಮೀಸಲಾತಿಗೆ ವಿರೋಧ ಕೇಳಿಬಂದಿತ್ತು. ತಜ್ಮುಲ್ಲಾ ಹುಸೇನ್‌ ಎಂಬ ನಾಯಕರು ಮುಸ್ಲಿಮ್‌ ಮೀಸಲಾತಿಯನ್ನು ವಿರೋಧಿಸಿದ್ದರು. ಈಗ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ಗಾಗಿ ಮೀಸಲಾತಿ ನೀಡಿದೆ. ಹಿಂದೂ-ಮುಸ್ಲಿಂ ನಡುವೆ ಒಡಕು ತಂದು ಬ್ರಿಟಿಷರ ಕೆಲಸವನ್ನು ಕಾಂಗ್ರೆಸ್‌ ಮುಂದುವರಿಸುತ್ತಿದೆ. ಗುತ್ತಿಗೆಯಲ್ಲಿನ ಮೀಸಲಾತಿಯಿಂದಾಗಿ ಇದರಿಂದಾಗಿ ಹಿಂದೂಗಳಿಗೆ ಅವಕಾಶ ಕಡಿಮೆಯಾಗಿದೆ. ಈಗಾಗಲೇ ಗುತ್ತಿಗೆದಾರರಲ್ಲಿ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಧರ್ಮಾಧಾರಿತ ಮೀಸಲಾತಿಯನ್ನು ಅಂಬೇಡ್ಕರ್‌ ವಿರೋಧಿಸಿದ್ದರು. ಇದನ್ನು ಕೂಡ ಕಾಂಗ್ರೆಸ್ ಹೇಳಬೇಕು ಎಂದರು.

ಗ್ಯಾರಂಟಿ ಸಮಿತಿಗೆ ವಿರೋಧ

ಗ್ಯಾರಂಟಿ ಯೋಜನೆಯನ್ನು ಜನರಿಗೆ ನೇರವಾಗಿ ನೀಡುವುದು ಬಿಟ್ಟು ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಅಧಿಕಾರಿಗಳೇ ಇರುವಾಗ ಕಾರ್ಯಕರ್ತರು ಸಭೆ ನಡೆಸುವುದು ಏಕೆ? ಗ್ಯಾರಂಟಿ ಅನುಷ್ಠಾನ ಸಮಿತಿಗಳಿಂದ 150 ಕೋಟಿ ರೂ. ನಷ್ಟವಾಗಲಿದೆ. ಇವರು ಏಜೆಂಟ್‌ಗಳಂತೆ ಕೆಲಸ ಮಾಡಲಿದ್ದಾರೆ. ಇದರ ವಿರುದ್ಧ ಬಿಜೆಪಿ ಅಧಿವೇಶನದಲ್ಲಿ ಹೋರಾಟ ಮಾಡಿದೆ ಎಂದರು.

ಲೋಕಸೇವಾ ಆಯೋಗದ ಅಕ್ರಮ, ದಲಿತರ ಹಣ ವರ್ಗಾವಣೆ ಬಗ್ಗೆಯೂ ಅಧಿವೇಶನದಲ್ಲಿ ಮಾತನಾಡಿದ್ದೇನೆ. ಎಸ್‌ಸಿಎಸ್ಪಿ/ಟಿಎಸ್‌ಪಿ ಹಣ ವರ್ಗಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ತಪ್ಪಾಗಿ ಉತ್ತರ ನೀಡಿದ್ದಾರೆ. ಹುಲಿ ಯೋಜನೆಗೂ ಈ ಹಣ ಬಳಸಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ಮುಂದೆ ಬೆತ್ತಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ನಿಗಮಗಳಿಗೆ 1,600 ಕೋಟಿ ರೂ. ಹಣ ಕಡಿತವಾಗಿರುವುದರಿಂದ ಮೈಕ್ರೋ ಫೈನಾನ್ಸ್‌ಗಳಿಂದ ಜನರು ಸಾಲ ಪಡೆದಿದ್ದಾರೆ. ಆದರೆ ಸರ್ಕಾರ ಕಾನೂನು ತಂದು ಸುಮ್ಮನಾಗಿದೆ. ಕಾನೂನು ತಂದ ಬಳಿಕವೂ ಆತ್ಮಹತ್ಯೆ ನಡೆದಿದೆ. ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಿರುವುದರ ಬಗ್ಗೆಯೂ ಪ್ರಶ್ನೆ ಮಾಡಿದ್ದೇನೆ. ವಿವಿಗಳ ವಿಚಾರದಲ್ಲಿ ಸರ್ಕಾರ ನಿರಾಸಕ್ತಿ ತೋರಿಸಿದೆ ಎಂದರು.


Spread the love

LEAVE A REPLY

Please enter your comment!
Please enter your name here