ಬೆಂಗಳೂರು:– ರಾಜ್ಯದಲ್ಲಿ ಹನಿಟ್ರ್ಯಾಪ್ ಯತ್ನ ಪ್ರಕರಣವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಸಚಿವ ರಾಜಣ್ಣ ಅವರು ನಾಳೆ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮನಸ್ಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಭಯ ಹಸ್ತ ನೀಡಿದ್ದು, ನಾಳೆ ಪ್ರಕರಣ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣ ದಾಖಲಾದ ಬಳಿಕ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಮಾಹಿತಿಯ ಪ್ರಕಾರ ವಿಶೇಷ ತನಿಖಾ ತಂಡ ಮೂಲಕವೇ ತನಿಖೆ ಮಾಡಿಸುವ ಸಾಧ್ಯತೆ ಇದೆ.
ಇನ್ನೂ ವಿಧಾನಸಭೆಯಲ್ಲಿ ಪ್ರಸ್ತಾಪ ಆಗಿರುವ ಹನಿಟ್ರ್ಯಾಪ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಹೊಸ ಕಂಪನ ಸೃಷ್ಟಿಸಿದೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕೆ ಎನ್ ರಾಜಣ್ಣ ಹಾಗೂ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ ಅವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಇದೆ. ಈ ವಿಚಾರವನ್ನು ಸ್ವತಃ ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಹೀಗಾಗಿ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಘಟನೆ ಅಧಿಕೃತವಾಗಿ ಬಹಿರಂಗಗೊಂಡರೂ ಈವರೆಗೆ ದೂರು ದಾಖಲಾಗಿಲ್ಲ. ಇದಕ್ಕೆ ಕಾರಣ ಏನು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸ್ವತಹ ರಾಜಣ್ಣ ಅವರೇ ನಾಳೆ ದೂರು ಕೊಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ.