ಕುಚಿಕು ಗೆಳೆಯನ ಅಗಲಿಕೆಗೆ ಕಣ್ಣೀರು ಮಿಡಿದ ವೃದ್ಧ!

Vijayasakshi (Gadag News) :

ಟೀ ಮಾರುವ ತುಕಾರಾಮ, ಕಾಲು ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ ರವಿಕುಮಾರ

ಇಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು ಚಿಲ್ಲರೆ ಹಣ!

ವಿಜಯಸಾಕ್ಷಿ ಸುದ್ದಿ, ಗದಗ

ಅವರಿಬ್ಬರದು ದಶಕಗಳ ಕಾಲದ ಗೆಳತನ. ಇಬ್ಬರೂ ಜೊತೆಗೆ ಬದುಕು ಸಾಗಿಸುತ್ತಿದ್ದರು. ಎಲ್ಲಿಗೆ ಹೋದರೂ ಇಬ್ಬರು ಕೂಡಿ ಹೋಗುತ್ತಿದ್ದರು. ಒಬ್ಬಾತ ಟೀ ಮಾರುತ್ತಿದ್ದರೆ, ಇನ್ನೊಬ್ಬ ಭಿಕ್ಷೆ ಬೇಡುತ್ತಿದ್ದ. ಆದರೆ ಈಗ ಭಿಕ್ಷುಕ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ಜೀವದ ಗೆಳೆಯನನ್ನು ಕಳೆದುಕೊಂಡ ಟೀ ಮಾರುವಾತ ದಿಕ್ಕುಗಾಣದೆ ಕಣ್ಣೀರು ಹಾಕುತ್ತಿದ್ದಾನೆ.

ಇದು ಯಾವುದೇ ಸಿನೆಮಾದ ಕಥೆಯಲ್ಲ. ಗದಗನಲ್ಲಿ ನಡೆದ ಘಟನೆ. ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟವನು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನ ರವಿಕುಮಾರ್ ವೆಂಕಣ್ಣ ಇಲ್ಲೂರ. ಈತನಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿ ತುಕಾರಾಂ ಪಾಸ್ತೆ ಕಣ್ಣೀರು ಮಿಡಿಯುತ್ತಿದ್ದಾನೆ.

ತುಕಾರಾಂ ಪಾಸ್ತೆ

ಇವರಿಬ್ಬರೂ ಸದ್ಯ ಗದಗ ಸಮೀಪದ ಕಳಸಾಪುರ ಗ್ರಾಮದಲ್ಲಿ ವಾಸವಾಗಿದ್ದರು. ಎಲ್ಲೆಲ್ಲೋ ತಿರುಗಾಡಿ ಎರಡು ವರ್ಷದ ಹಿಂದೆ ಕಳಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದರು.
ಗಂಗಾವತಿಯಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿದ್ದ ತುಕಾರಾಮ್ ಪಾಸ್ತೆಗೆ ಆಕಸ್ಮಿಕವಾಗಿ ಸಿಂಧನೂರಿನ ರವಿಕುಮಾರ್ ಪರಿಚಯವಾಗಿತ್ತು.

ಮೃತ ರವಿಕುಮಾರ್

ರವಿಕುಮಾರ್ ಲಾರಿ ಚಾಲಕನಾಗಿ ಅಪಘಾತವೊಂದರಲ್ಲಿ ಕಾಲ ಕಳೆದುಕೊಂಡು ಹೆಂಡತಿ, ಮಕ್ಕಳ ಜೊತೆಗೆ ಜಗಳ ಮಾಡಿ ಮನೆ ಬಿಟ್ಟು ಗಂಗಾವತಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ತುಕಾರಾಮ್ ಪಾಸ್ತೆ ಟೀ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದ.
ಇವರಿಬ್ಬರಿಗೂ ಪರಿಚಯ ದೋಸ್ತಿಗೆ ತಿರುಗಲು ಕಾರಣ ಚಿಲ್ಲರೆ ಹಣ. ಟೀ ಮಾರಾಟ ಮಾಡುವಾಗ ಚಿಲ್ಲರೆ ಸಮಸ್ಯೆ ಆದಾಗ ಭಿಕ್ಷೆಯಿಂದ ಬಂದ ಚಿಲ್ಲರೆ ಹಣವನ್ನು ರವಿಕುಮಾರ ತುಕಾರಾಮನಿಗೆ ಕೊಡುತ್ತಿದ್ದ. ಹೀಗಾಗಿ ಇಬ್ಬರ ನಡುವೆ ಗಾಢವಾದ ಗೆಳೆತನ ಬೆಳೆದಿದೆ.

ರಾಜ್ಯ, ಹೊರರಾಜ್ಯದಲ್ಲಿ ಜಾತ್ರೆ, ಸಮಾವೇಶದಲ್ಲಿ ಇವರಿಬ್ಬರೂ ಹಾಜರಾಗುತ್ತಿದ್ದರು. ತುಕಾರಾಮ ಟೀ ಮಾರಿದರೆ, ರವಿಕುಮಾರ್ ಭಿಕ್ಷೆ ಬೇಡುತ್ತಿದ್ದ. ಇದೇ ರೀತಿ ಎರಡು ವರ್ಷಗಳ ಹಿಂದೆ ಗದಗಿಗೆ ಬಂದಿದ್ದಾರೆ. ವಾಸಕ್ಕೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆ ಸಿಗದಿದ್ದಾಗ ಸಮೀಪದ ಕಳಸಾಪುರ ಗ್ರಾಮದಲ್ಲಿ ಸಣ್ಣದಾದ ಮನೆ ಹಿಡಿದಿದ್ದರು.

ಕುಟುಂಬದವರು ಬರಲಿಲ್ಲ:

ನಿತ್ಯ ಇಬ್ಬರದೂ ಅದೇ ಕಾಯಕ. ನಾಲ್ಕು ದಿನಗಳ ಹಿಂದೆ ರವಿಕುಮಾರ್‌ಗೆ ಅನಾರೋಗ್ಯ ಕಾಡಿದೆ. ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ರವಿಕುಮಾರ್ ಮೃತಪಟ್ಟಿದ್ದಾನೆ. ತುಕಾರಾಮ, ರವಿಕುಮಾರ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ. ಆದರೆ ಅವರು ಕ್ಯಾರೆ ಅಂದಿಲ್ಲ. ವಾಪಸ್ ಕಳಸಾಪುರಕ್ಕಾದರೂ ಶವ ಒಯ್ಯೋಣ ಅಂದರೆ ಗ್ರಾಮಸ್ಥರು ಬೇಡ ಅಂದಿದ್ದಾರೆ. ಬೆಳಗ್ಗೆ ಎದ್ದು ನಗರಸಭೆ ಸಿಬ್ಬಂದಿ ಶವಸಂಸ್ಕಾರ ನಡೆಸಿದ್ದಾರೆ.

ಕೊರೊನಾ ಜಗತ್ತಿನ ಸಂಬಂಧಗಳಲ್ಲಿ ಎಷ್ಟು ಹುಳಿ ಹಿಂಡಿದೆ ಎಂದರೆ, ಗೆಳೆಯನ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡುವ ಅವಕಾಶವೂ ಇಲ್ಲದಂತಾಗಿದೆ. ನಿರ್ವ್ಯಾಜ ಸ್ನೇಹವನ್ನು ಕೊಟ್ಟ ಗೆಳೆಯನಿಗಾಗಿ ಕಣ್ಣೀರು ಮಿಡಿಯುವ ಆಯ್ಕೆಯಲ್ಲದೆ ತುಕಾರಾಮನಿಗೆ ಮತ್ತೇನೂ ಉಳಿದಿಲ್ಲ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.