ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಿಷನ್ ವಿದ್ಯಾ ಕಾಶಿ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ಮಾರ್ಚ್ 21ರ ಮೊದಲ ದಿನದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ 4 ಗಂಟೆ ಮೊದಲು ನವಲಗುಂದ ಪಟ್ಟಣದ ಗಾಂಧಿ ಬಜಾರ ಬಳಿಯ ಶಬಾನಾ ಪಠಾಸು ತಂದೆ ನೂರಹುಸೇನ ಪಠಾಸು ಮರಣ ಹೊಂದಿದ್ದರು. ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತಿಮ ಕ್ರಿಯೆಯಲ್ಲಿ ಶಬಾನಾ ಭಾಗವಹಿಸಿದ್ದಳು.
ತಂದೆಯ ಮರಣದಿಂದ ಧೃತಿಗೆಡದೆ, ನೋವಿನ ಮಧ್ಯೆಯೂ ಪರೀಕ್ಷೆ ಬರೆದು, ಧೈರ್ಯ ತೋರಿ, ಶಬಾನಾ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾಳೆ. ಈ ವಿದ್ಯಾರ್ಥಿನಿಯ ನಡೆ ಮೆಚ್ಚಿ, ಧೈರ್ಯ ತುಂಬಿ ಅವಳ ಓದಿಗೆ ನೆರವು, ಸಹಕಾರ ನೀಡಲು ಸ್ವತಃ ಶಾಸಕ ಎನ್.ಎಚ್. ಕೋನರಡ್ಡಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ ಸಿಇಓ ಭುವನೇಶ ಪಾಟೀಲ ಬುಧವಾರ ಶಾಬಾನಾ ಮನೆಗೆ ಭೇಟಿ ನೀಡಿ, ಶಬಾನಾ ಹಾಗೂ ಅವಳ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮುಂದಿನ ಮೂರು ತಿಂಗಳಲ್ಲಿ ಆಶ್ರಯ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ ಶಾಸಕ ಎನ್.ಎಚ್. ಕೋನರಡ್ಡಿ, ಅಲ್ಲಿಯವರೆಗಿನ ಮನೆ ಬಾಡಿಗೆ ಮೊತ್ತವನ್ನು ಸ್ಥಳದಲ್ಲಿಯೇ ಸ್ವಂತ ಹಣದಲ್ಲಿ ನೀಡಿದರು.
ತಾಯಿ ಜನ್ನತಬಿ ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಬಾನಾ ಕುಟುಂಬ ಅತಂತ್ರವಾಗಿದೆ. ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡ ಶಾಸಕ ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಶಬಾನಾ ಕುಟುಂಬಕ್ಕೆ ಸರಕಾರದ ನೆರವು ಹಾಗೂ ಮಾನಸಿಕ ಬೆಂಬಲ, ಧೈರ್ಯ ಸ್ಥೈರ್ಯಗಳನ್ನು ತುಂಬಿದ್ದಾರೆ.
ಮನೆ, ಆರ್ಥಿಕ ನೆರವಿನ ಭರವಸೆ
ಶಾಸಕರಾದ ಎನ್.ಎಚ್. ಕೋನರಡ್ಡಿ ಶಬಾನಾ ಕುಟುಂಬಕ್ಕೆ ಆದ್ಯತೆ ಮೇಲೆ ಆಶ್ರಯ ಮನೆ ಮಂಜೂರಿ ಮಾಡಿದ್ದಾರೆ. ಫಲನಾಭವಿ ಪಾಲಿನ ರೂ. 1 ಲಕ್ಷ ಹಣವನ್ನು ತಾವು ಇತರ ನೆರವಿನಿಂದ ಸ್ವತಃ ಭರಿಸಿ, ಮುಂದಿನ ಮೂರು ತಿಂಗಳಲ್ಲಿ ಮನೆ ಕಟ್ಟಿಸಿ ಕೊಡುವುದಾಗಿಯೂ ಭರವಸೆ ನೀಡಿದರು. ಕುಟುಂಬಕ್ಕೆ ಆರ್ಥಿಕ ಆಸರೆ ನೀಡಲು ಪಶುಪಾಲನೆ ಇಲಾಖೆಯಿಂದ ನಾಟಿ ಕೋಳಿ ಸಾಕಾಣಿಕೆ ಯೋಜನೆಯಡಿ ಶಬಾನಾ ತಾಯಿಯನ್ನು ಫಲಾನುಭವಿಯಾಗಿ ಆಯ್ಕೆ ಮಾಡಿ, ತಕ್ಷಣ 20 ನಾಟಿ ಕೋಳಿ ಮರಿಗಳನ್ನು ಮತ್ತು ಮುಂದಿನ ದಿನಗಳಲ್ಲಿ 80 ನಾಟಿ ಕೋಳಿ ಮರಿಗಳನ್ನು ನೀಡುವುದಾಗಿ ತಿಳಿಸಿದರು.