ನವದೆಹಲಿ: ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳ ಸಭೆ ವೇಳೆ ಹಾಲಿನ ದರ ಏರಿಕೆ ಹೆಚ್ಚಳ ವಿರೋಧಿಸಿ, ಇದು ಈಸ್ಟ್ ಇಂಡಿಯಾ ಸರ್ಕಾರ ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಮಾತನಾಡಿದ ಅವರು,
ಕುಮಾರಸ್ವಾಮಿ ಅವರು ಏನಾದರೂ ಟೀಕೆ ಮಾಡಲಿ. ರೈತರು ಬದುಕಬೇಕಲ್ಲವೇ? ಅವರಿಗೆ ಕಾಳಜಿ ಇದ್ದರೆ, ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ. ಜಿಎಸ್ ಟಿ, ಇಂಧನ ತೈಲ ಬೆಲೆ ಕಡಿಮೆ ಮಾಡಿಸಲಿ” ಎಂದು ತಿರುಗೇಟು ನೀಡಿದರು.
ದರ ಹೆಚ್ಚಳದ ಹಣ ರೈತರಿಗೆ ಹೋಗುವುದಿಲ್ಲ, ಸರ್ಕಾರಕ್ಕೆ ಹೋಗಲಿದೆ ಎಂಬ ಕುಮಾರಸ್ವಾಮಿ ಟೀಕಿ ಬಗ್ಗೆ ಕೇಳಿದಾಗ, “ಸರ್ಕಾರಕ್ಕೆ ಹೇಗೆ ಹೋಗುತ್ತದೆ. ಹಾಗಿದ್ದರೆ ಕುಮಾರಸ್ವಾಮಿ ಅವರಿಗೆ ಹಾಲು ಒಕ್ಕೂಟದ ವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಸಹೋದರನ ಬಳಿ ಮಾಹಿತಿ ಪಡೆಯಲಿ” ಎಂದು ಹರಿಹಾಯ್ದರು.
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ನಾವು ಈ ಪತ್ರ ನೋಡುತ್ತೇವೆ, ಪರಿಶೀಲನೆ ಮಾಡಿ, ಚರ್ಚಿಸುತ್ತೇವೆ. ಆನಂತರ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ರಾಜೇಂದ್ರ ಅವರ ದೂರಿನ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಗೊತ್ತಿಲ್ಲ” ಎಂದರು. ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ಕೇಳಿದಾಗ, “ಅವರ ಪಕ್ಷದವರು ಯಾರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ಮಾತನಾಡಿ ನಾನು ಏಕೆ ಅವರ ಪಕ್ಷದ ವಕ್ತಾರನಾಗಲಿ” ಎಂದು ತಿಳಿಸಿದರು.