ಹೋಳಿ ಹಬ್ಬದ ರಂಗುಗಳು ಮಾಸಲಾರಂಭಿಸುತ್ತಿದ್ದಂತೆಯೇ ಪ್ರಾರಂಭವಾಗುವ ಹಬ್ಬವೇ ಯುಗಾದಿ. ಹಿಂದೂಗಳ ಹೊಸ ವರ್ಷವನ್ನು ಸೂಚಿಸುವ ಹಬ್ಬವೇ ಈ ಯುಗಾದಿ. ಹಿಂದೂ ಧರ್ಮದಲ್ಲಿ ನಮ್ಮ ಪೂರ್ವಜರು ಹವಾಮಾನಕ್ಕೆ ಅನುಗುಣವಾಗಿಯೇ ದೀಪಾವಳಿ, ಹೋಳಿ, ದಸರಾ, ನಾಗರಪಂಚಮಿ ಸೇರಿದಂತೆ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ಧತಿಯನ್ನು ರೂಢಿ ಮಾಡಿದ್ದಾರೆ.
ಪ್ರಕೃತಿಯು ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ, ಸೂರ್ಯನೂ ಕೂಡಾ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಪಥ ಬದಲಿಸಿ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಇಲ್ಲಿ ಎಲ್ಲವೂ ಹೊಸದಾಗಿಯೇ ಇರುವುದರಿಂದ ಯುಗಾದಿ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಪಾಡ್ಯದಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪ್ರತಿವರ್ಷ ಜನವರಿ 1ರಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ಅಥವಾ ಪಂಚಾಂಗದ ಪ್ರಕಾರ ಹಿಂದೂಗಳಿಗೆ ಯುಗಾದಿ ಹಬ್ಬವನ್ನು ಆಚರಿಸುವ ದಿನವೇ ಹೊಸ ವರ್ಷದ ಮೊದಲ ದಿನವಾಗಿರುತ್ತದೆ.
ಧಾರ್ಮಿಕ ಪುರಾಣ, ವೇದಗಳಲ್ಲಿ ಯುಗಾದಿ ಎಂದರೆ ಯುಗಗಳ ಆರಂಭ ಎಂದು ವ್ಯಾಖ್ಯಾನಿಸಲಾಗಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಾಯುಗ ಮತ್ತು ಕಲಿಯುಗಗಳನ್ನು ಕಾಲಗಣನೆಯ ಪ್ರಮುಖ ಘಟ್ಟಗಳಾಗಿ ನೋಡಿದಾಗ, ಯುಗವೆಂದರೆ ವರ್ಷವೆಂದು ತಿಳಿಯುವದು ಮತ್ತು ಯುಗಾದಿ ಎಂದರೆ ವರ್ಷದ ಆರಂಭ ಎನ್ನುವುದು ಸೂಕ್ತವೆನಿಸುತ್ತದೆ.
ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿ ಆಚರಣೆಯ ವೈಶಿಷ್ಟ್ಯತೆಯಾಗಿದೆ. ಈ ದಿನ ಭಗವಂತ ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ತಲುಪಿ, ರಾಮರಾಜ್ಯವಾಳಲು ಪ್ರಾರಂಭಿಸಿದನು. ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ್ದು ಕೂಡ ಇದೇ ಶುಭ ಸಂದರ್ಭದಲ್ಲಿ. ಇಂದ್ರನು ವೈಜಯಂತಿ ಮಾಲೆಯನ್ನು ಮತ್ತು ಚಿನ್ನದ ಚಕ್ರಾಧಿಪತ್ಯದ ದ್ವಜವನ್ನು ಚಿದಿರಾಜ್ಯದ ಅರಸು ವಸುವಿನ ತಲೆಯ ಮೇಲೆ ಇಟ್ಟ ದಿನ.
ಯುಗಾದಿ ಹಬ್ಬದ ಆರಂಭಕ್ಕೂ ಮುನ್ನವೇ ಜನರು ಮನೆಯನ್ನು ಸ್ವಚ್ಛಗೊಳಿ, ಸುಣ್ಣ ಬಣ್ಣಗಳನ್ನು ಹಚ್ಚುತ್ತಾರೆ. ಪಾಡ್ಯದಂದು ಮನೆಯ ಅಂಗಳವನ್ನು ಸಗಣಿಯಿಂದ ಬಳಿದು, ರಂಗೋಲಿ ಬಿಡಿಸಿ, ಬಾಗಿಲಿಗೆ ಮಾವಿನ ಎಲೆಗಳಿಂದ ತೋರಣವನ್ನು ಕಟ್ಟುತ್ತಾರೆ. ಈ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿಕೊಂಡು, ಸ್ವಚ್ಚವಾದ ಹೊಸಬಟ್ಟೆಯನ್ನೂ ಧರಿಸಿಕೊಂಡು ಮನೆಯ ದೇವರನ್ನು ಪೂಜಿಸಿ, ಕಿರಿಯರು ಹಿರಿಯರಿಗೆ ಮತ್ತು ಸಂಬಂಧಿಕರಿಗೆ ನಮಸ್ಕರಿಸಿ ಗೌರವ ತೋರುತ್ತಾರೆ. ಪರಸ್ಪರರು ಬೇವು-ಬೆಲ್ಲವನ್ನು ನೀಡುವುದರೊಂದಿಗೆ ಸೇವನೆ ಮಾಡುತ್ತಾರೆ.
ಬೇವು-ಬೆಲ್ಲ ಮಿಶ್ರಣದ ಸೇವನೆ ರೋಗ ನಿರೋಧಕ ಶಕ್ತಿಯ ಪ್ರತೀಕ, ಸೌಂದರ್ಯ ವರ್ಧಕ, ಬ್ಯಾಕ್ಟಿರಿಯಾ ಪ್ರತಿರೋಧಕ, ಔಷಧೀಯ ಗುಣಗಳನ್ನೂ ಹೊಂದಿದೆ. ದೀರ್ಘಾಯಸ್ಸು, ವಜ್ರದಂತೆ ಗಟ್ಟಿಮುಟ್ಟಾದ ದೇಹ, ಸಕಲ ಸಂಪತ್ತುಗಳ ಪ್ರಾಪ್ತಿ ಹಾಗೂ ರೋಗರುಜಿನಗಳ ನಿವಾರಣೆ ಇವೆಲ್ಲವೂ ಬೇವು-ಬೆಲ್ಲ ಭಕ್ಷಣೆಯಿಂದ ಸಾಧ್ಯವಿದೆ.
ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ರೈತರಿಗೆ ‘ಉಂಡಿದ್ದೇ ಉಗಾದಿ ಮಿಂದಿದ್ದೇ ದೀಪಾವಳಿ’ ಎನ್ನುವ ಗಾದೆಯ ಹಾಗೆ ಯುಗಾದಿ ಎಂದರೆ ಸಂಭ್ರಮವೋ ಸಂಭ್ರಮ! ಈ ಹೊಸ ವರ್ಷವನ್ನು ನಿರೀಕ್ಷೆ, ಹೊಸ ಭರವಸೆ ಮತ್ತು ಉತ್ಸಾಹದಿಂದ ಸ್ವಾಗತಿಸೋಣ.
– ಪಾಂಡು ಆಲಪ್ಪ ಚವ್ಹಾಣ.
ಉಪನ್ಯಾಸಕರು, ಬೆಳಧಡಿ.