ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಸಾವು – ನೋವುಗಳು ಮಿತಿ ಮೀರುತ್ತಿವೆ. ಕೊರೊನಾದಿಂದ ಹಲವೆಡೆ ಮಾನವೀಯ ಮೌಲ್ಯಗಳು ಕೂಡ ಇಲ್ಲದಾಗಿದೆ. ಕೊರೊನಾದಿಂದಾಗಿ ಮನೆಯಲ್ಲಿಯೇ ಸಾವನ್ನಪ್ಪಿದ್ದ ವಯೋವೃದ್ಧನ ಅಂತ್ಯ ಸಂಸ್ಕಾರ ಮಾಡಲು ಯಾರೂ ಮುಂದೆ ಬರದ ಕಾರಣ, ಮುಸ್ಲಿಂ ಯುವಕರು ದ್ವಿಚಕ್ರ ವಾಹನದಲ್ಲಿಯೇ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕು ಆಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ದ ಮಹದೇವ ಎಂಬುವವರು ಸಾವನ್ನಪ್ಪಿದ್ದರು. ಆದರೆ, ಕೊರೊನಾದ ಭಯದಿಂದಾಗಿ ಗ್ರಾಮಸ್ಥರು ಶವ ಎತ್ತಲು ಮುಂದೆ ಬರಲಿಲ್ಲ. ಸಂಬಂಧಿಕರು ಕೂಡ ಮುಂದೆ ಬರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಯುವಕರ ತಂಡ, ಬೈಕ್ ನಲ್ಲಿಯೇ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಪಿಪಿಟಿ ಕಿಟ್ ಧರಿಸಿಯೇ ಯುವಕರು ಶವ ಸಾಗಾಟ ಮಾಡಿದ್ದಾರೆ. ಶವ ಸಾಗಿಸಲು ಈ ಯುವಕರಿಗೆ ಯಾವುದೇ ವಾಹನಗಳು ಸಿಕ್ಕಿರಲಿಲ್ಲ. ಹೀಗಾಗಿ ಶವಕ್ಕೆ ಏಣಿ ಕಟ್ಟಿ ದ್ವಿಚಕ್ರ ವಾಹನದಲ್ಲಿಯೇ ಸಾಗಾಟ ಮಾಡಿ, ಊರ ಹೊರಗ ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಈ ಮುಸ್ಲಿಂ ಯುವಕರ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಎನ್ನುತ್ತಿದ್ದಾರೆ.