ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಯುಗಾದಿ ಪಾಡ್ಯದ ದಿನ ಶ್ರೀಮಠದ ಜಮೀನಿನಲ್ಲಿ ಭೂಮಿಪೂಜಾ ಕಾರ್ಯ ನೆರವೇರಿಸಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಈ ವೇಳೆ ಶುಭಾಶೀರ್ವಾದ ಸಂದೇಶ ನೀಡಿದ ಅವರು, ಈ ವರ್ಷ ಉತ್ತಮ ಮಳೆ-ಬೆಳೆಯಾಗಿ ಜಗತ್ತಿನ ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತನ ಬದುಕು ಹಸನಾಗಲಿ. ಕೃಷಿ ನಮ್ಮ ಸಂಸ್ಕೃತಿಯಾಗಿದ್ದು, ಈ ಬಗ್ಗೆ ಯಾರಲ್ಲಿಯೂ ಕೀಳರಿಮೆಯಿಲ್ಲದೇ ಹೆಮ್ಮೆಯಿಂದ ತೊಡಗಿಸಿಕೊಳ್ಳಬೇಕು. ಭೂಮಿತಾಯಿಯನ್ನು ನಂಬಿ ಬದುಕಿದವರಿಗೆ ಎಂದೂ ಕೇಡಾಗದು. ರೈತರು ಸಾವಯುವ ಕೃಷಿಯತ್ತ ಚಿತ್ತ ಹರಿಸಬೇಕು. ವಿಶ್ವವಸು ಸಂವತ್ಸರವು ಎಲ್ಲರ ಬಾಳಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸಿದರು.
ಯುಗಾದಿ ಪಾಡ್ಯದಂದು ಬೆಳಿಗ್ಗೆ ಎಲ್ಲರೂ ಹೊಸ ಉಡುಗೆ ತೊಟ್ಟು ಶೃದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ ಬೇವು-ಬೆಲ್ಲ ಹಂಚುವದು, ವಿಶೇಷವಾಗಿ ರೈತ ಸಮುದಾಯ ನಸುಕಿನಲ್ಲಿಯೇ ತಮ್ಮ ಜೀವನಾಡಿ ಎತ್ತುಗಳ ಮೈ ತೊಳೆದು, ಶೃಂಗರಿಸಿಕೊಂಡು ಹೊಲಕ್ಕೆ ತೆರಳಿ ಭೂಮಿತಾಯಿ, ಎತ್ತು ಹಾಗೂ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆಗಳಿಗೆ ಸಾಂಕೇತಿಕ ಚಾಲನೆ ನೀಡಿದರು.
ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳಿಗೆ ಪೂಜೆ ಸಲ್ಲಿಸಿದರು. ಕೆಲವರು ಹೊಸ ವ್ಯವಹಾರ ಪ್ರಾರಂಭಿಸಿದರೆ, ಅನೇಕರು ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಹೊಸ ವರ್ಷದ ದಿನ ಆಭರಣ, ಬಟ್ಟೆ, ಇಲೆಕ್ಟ್ರಾನಿಕ್, ಹೊಸ ವಾಹನ ಖರೀದಿ, ಭೂಮಿಪೂಜೆ ಇತರೆಲ್ಲ ಶುಭ ಕಾರ್ಯಗಳನ್ನು ಕೈಗೊಂಡರು. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಊರ ದೇವರ ಜಾತ್ರೆ, ಉತ್ಸವ, ಪೂಜೆಗಳು ನೆರವೇರಿದವು.