ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಮಾನಗಳಲ್ಲಿ ಎಲ್ಲೆಡೆ ಅಸಮಾನತೆ ತಾಂಡವವಾಡುತ್ತಿದ್ದು, ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಲ್ಲಿಯೂ ಭ್ರಾತೃತ್ವ, ಸಮಾನತೆ ಬೆಸೆಯುವ ಉದ್ದೇಶದಿಂದ ಎಪ್ರಿಲ್ 14ರಿಂದ ಬಸವ ಜಯಂತಿಯವರೆಗೂ 15 ದಿನಗಳ ಕಾಲ ಜಿಲ್ಲೆಯಾದ್ಯಂತ ಸಮಾನತೆಯ ರಥಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ಬುದ್ಧ, ಬಸವ, ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್, ಶಿಶುನಾಳ ಶರೀಫ, ಪ್ರಭು ಶ್ರೀರಾಮಚಂದ್ರ ಸೇರಿದಂತೆ ಹಲವು ದಾರ್ಶನಿಕರ ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದು ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ನಗರದ ತಮ್ಮ ನಿವಾಸದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, `ಸಮಾನತೆಯ ನಡಿಗೆ’ ಎಂಬ ಕಾರ್ಯಕ್ರಮವನ್ನು 2024ರಲ್ಲಿ ಹಮ್ಮಿಕೊಳ್ಳಲಾಗಿತ್ತು. `ಸಮಾನತೆ ಮಂದಿರ’ ಸ್ಥಾಪಿಸುವ ಗುರಿಯನ್ನೂ ಹೊಂದಲಾಗಿದ್ದು, ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಲಿಂಗಾಯತ ಸಮುದಾಯದವರು ಮಂದಿರ ನಿರ್ಮಿಸಲು 2 ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಮುಂದಿನ ವರ್ಷ ಭೂಮಿಪೂಜೆ ನಡೆಸಿ, ಎರಡು ವರ್ಷಗಳಲ್ಲಿ ಮಂದಿರ ಪೂರ್ಣಗೋಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜಕಾರಣದ ಉದ್ದೇಶ ಇಟ್ಟುಕೊಂಡು ಮಂದಿರ ನಿರ್ಮಿಸುತ್ತಿಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ಜಾತಿ, ಸಮುದಾಯಕ್ಕೆ ಸಿಮಿತರಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಕೇವಲ ಒಂದು ಜಾತಿ, ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಜನರಲ್ಲಿನ ಈ ಮನೋಭಾವ ಹೋಗಬೇಕು. ಸಮಾನತೆಗಾಗಿ ಶ್ರಮಿಸಿದ ಅವರು ಅಖಂಡ ಭಾರತೀಯರ ಆರಾಧ್ಯ ದೈವ ಆಗಬೇಕು ಎನ್ನುವ ಉದ್ದೇಶದಿಂದ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಂದೇಶ ಸಾರುವ ಗುರಿಯೊಂದಿಗೆ ಜ್ಞಾನಕ್ಕಾಗಿ ಮಂದಿರ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು.
ಎಪ್ರಿಲ್ 15ರಂದು ಬುತ್ತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕೋಟಮುಚಗಿ, ಕಲ್ಲೂರ, ಹುಲಕೋಟಿ, ಗದಗ, ಹುಬ್ಬಳ್ಳಿ ಸೇರಿದಂತೆ ಹಲವು ಭಾಗಗಳಿಂದ ಸಾವಿರಾರು ಬುತ್ತಿಗಳನ್ನು ಭಕ್ತರು ತರಲಿದ್ದಾರೆ. ಸಮಾನತೆ ಸಾರುವುದೇ ಈ ಕಾರ್ಯಕ್ರಮ ಮೂಲ ಉದ್ದೇಶವಾಗಿದ್ದು, ಕಾರ್ಯಕ್ರಮದಲ್ಲಿ ರಾಜಕಾರಣಿಗಳಿಗೆ ಪ್ರವೇಶವಿಲ್ಲ. ರೈತರು, ಶ್ರಮಿಕರು ನಮ್ಮ ಕಾರ್ಯಕ್ರಮದ ಪ್ರಮುಖ ಭಾಗವಾಗಿರುತ್ತಾರೆ. ರಥಯಾತ್ರೆ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಜೊತೆಗೂಡಿ ಸಮಾನತೆಯಿಂದ ನೆಲದ ಮೇಲೆ ಕುಳಿತು ಮುನ್ಸಿಪಲ್ ಮೈದಾನದಲ್ಲಿ ಬುತ್ತಿಯ ಭೋಜನ ಸೇವಿಸಲಾಗುವುದು ಎಂದವರು ತಿಳಿಸಿದರು.
ಈ ವೇಳೆ ವಾಲ್ಮೀಕಿ ಸೇವಾ ಸಮಿತಿ ಅಧ್ಯಕ್ಷ ಆನಂದ ಬೆಳದಡಿ, ಹೋರಾಟಗಾರ ರವಿಕಾಂತ್ ಅಂಗಡಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಉಡಚಪ್ಪ ಹಳ್ಳಿಕೇರಿ, ಮುತ್ತಣ್ಣ, ಮುತ್ತು ಮುಶಿಗೇರಿ, ಫಕ್ಕಿರೇಶ ಮುಳಗುಂದ, ವಿಜಯಲಕ್ಷ್ಮೀ ಮಾನ್ವಿ, ಉಮೇಶ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾನತೆ ಮಂದಿರವನ್ನು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನಿರ್ಮಿಸಲು ನಮ್ಮ ತಂಡ ಸಜ್ಜಾಗಿದೆ. ದೇಶಕ್ಕೆ ಸಮಾನತೆಯ ಮಂದಿರ ಮಾದರಿ ಆಗಬೇಕು ಎನ್ನುವ ಗುರಿ ಹೊಂದಲಾಗಿದ್ದು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ್ ಅವರು ಸಮಾನತೆ ಮಂದಿರ ನಿರ್ಮಾಣ ಮಾಡಲು ನಮಗೆ ಶಕ್ತಿ ನೀಡಲಿ. ಮಂದಿರ ನಿರ್ಮಿಸಲು ಅವರು ನಮ್ಮ ಜೊತೆ ಕೈಜೋಡಿಸಿದರೆ ಸ್ವಾಗತಿಸುತ್ತೇವೆ.
– ಅನಿಲ ಮೆಣಸಿನಕಾಯಿ.
ಯುವ ಮುಖಂಡ, ಗದಗ.