ಬೆಂಗಳೂರು: ಹಾಲು ಮತ್ತು ಕಸಕ್ಕೆ ತೆರಿಗೆ ವಿಧಿಸುವುದನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸುತ್ತ ಟ್ವೀಟ್ ಮಾಡಿದ್ದಾರೆ. ಇನ್ನೂ ಈ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು,
ಕುಮಾರಸ್ವಾಮಿ ಟ್ವೀಟ್ಗಳು ರಾಜ್ಯ ಸರ್ಕಾರದ ಕಾರ್ಯವೈಖರಿಯ ಮೇಲೆ ಯಾವುದೇ ಪರಿಣಾಮ ಬೀರಲ್ಲ, ತಮ್ಮ ಸರ್ಕಾರ ರೈತರ ಪರವಾಗಿದೆ, ಅವರಿಗೆ ಅನುಕೂಲ ಆಗಲಿ ಅಂತ್ಲೇ ಹಾಲಿನ ದರವನ್ನು ಹೆಚ್ಚಿಸಿದ್ದು, ಹಾಸನದಲ್ಲಿ ಕುಮಾರಸ್ವಾಮಿ ಅವರ ಅಣ್ಣನೇ ಹಾಲು ಒಕ್ಕೂಟದ ಅಧ್ಯಕ್ಷ, ಅವರಿಗೆ ₹4 ಕಡಿಮೆ ಮಾಡುವಂತೆ ಯಾಕೆ ಕೇಂದ್ರ ಸಚಿವ ಹೇಳಬಾರದು ಎಂದರು.
ಇನ್ನು ಕಸದ ವಿಚಾರವಾಗಿ ಹೇಳುವುದಾದರೆ, ಕೇಂದ್ರ ಬಿಜೆಪಿ ಸರ್ಕಾರ ಕಾನೂನು ಮಾಡಿದ್ದು, ಬಿಜೆಪಿ ಸರ್ಕಾರ 2022ರಲ್ಲೇ ದುಬಾರಿ ಸೆಸ್ ವಿಧಿಸಿದ್ದರು. ನಾವು ಅದನ್ನು ಕಡಿಮೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜಾಹೀರಾತು ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ನೋವು ನಮಗೂ ಅರಿವಾಗುತ್ತದೆ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ” ಎಂದು ತಿಳಿಸಿದರು.