ಗದಗ ಜಿಲ್ಲಾ ಪೊಲೀಸ್ ಸಮರ್ಥವಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪೊಲೀಸ್ ಅಂದರೆ ಶಿಸ್ತಿನ ಇಲಾಖೆ. ನಮಗೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಬಹುದು. ಗದಗ ಜಿಲ್ಲಾ ಪೊಲೀಸ್ ಅಂದರೆ ಹೆಮ್ಮೆಯ ಪೊಲೀಸ್ ಎಂದಾಗಬೇಕು. ಆ ರೀತಿಯಲ್ಲಿ ನಮ್ಮ ಕಾರ್ಯನಿರ್ವಹಣೆ ಇರಬೇಕು ಎಂದು ನಿವೃತ್ತ ಪಿಎಸ್‌ಐ ಎಚ್.ಎಚ್. ನೀಲಗುಂದ ಹೇಳಿದರು.

Advertisement

ಮಲ್ಲಸಮುದ್ರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ, ನಿವೃತ್ತ ಪೊಲೀಸರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಾರೆ. ಅಪರಾಧ ತಡೆಗಟ್ಟಲು ಹಾಗೂ ಅಪರಾಧ ಪತ್ತೆ ಹಚ್ಚಲು ಬದ್ಧತೆಯಿಂದ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಸರ್ಕಾರ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು. ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಶೇ. 50ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಗೆ ಮತ್ತು ಶೇ. 50ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ಈ ನಿಧಿಯನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೈದ್ಯಕೀಯ ವೆಚ್ಚಕ್ಕೆ ವಿನಿಯೋಗಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಶ್ವತ್ ಹೆಬಸೂರ, ಶಶಿ ಸಂಕಣ್ಣವರ, ಮೇಘರಾಜ ತೋಟಗಂಟಿ, ಡಾ. ಅರುಣಾ ಮಾಲಿ, ಅಭಿನಂದನ್ ಪಾಟೀಲ, ಅಶೋಕ ಹೊಳಕಣ್ಣವರ ಅವರಿಗೆ ಸಮುದಾಯ ರಕ್ಷರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಕಾರ್ಯನಿರ್ವಹಣೆ ತೋರಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ವೇದಿಕೆಯಲ್ಲಿದ್ದರು. ಎಂ.ಟಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್‌ಪಿ ಪ್ರಭುಗೌಡ ಕಿರೆದಳ್ಳಿ ವಂದಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿ ಸಮಿತಿ ಸಭೆ ಕರೆದು, ಕುಂದು ಕೊರತೆಗಳನ್ನು ಆಲಿಸಲಾಗುವುದು. ಪ್ರಸಕ್ತ ವರ್ಷ 3.28 ಲಕ್ಷ ಹಣವನ್ನು ವೈದ್ಯಕೀಯ ಧನಸಹಾಯ ಹಾಗೂ ಮರಣ ಹೊಂದಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಅಂತ್ಯ ಸಂಸ್ಕಾರಕ್ಕೆ 1.10 ಲಕ್ಷ ರೂ ನೀಡಲಾಗಿದೆ. ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಗದಗ ಜಿಲ್ಲಾ ಪೊಲೀಸ್ ಮುಂಚೂಣಿಯಲ್ಲಿದೆ. ಜಿಲ್ಲಾ ಪೊಲೀಸ್ ಸಿಬ್ಬಂದಿ ಇದೇ ರೀತಿ ಹೆಚ್ಚಿನ ಕೆಲಸ ಮಾಡಿ ಸಾರ್ವಜನಿಕರಿಂದ ಗೌರವ ಗಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದರು.

ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಕರಣಗಳಿಗೆ ಶಿಕ್ಷೆ ಆಗುತ್ತಿದೆ. ಇದರಿಂದಾಗಿ, ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಶ್ರಮಕ್ಕೆ ಬೆಲೆ ಸಿಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರ ಕಾರ್ಯ ಸ್ಮರಣೀಯ. ಗಂಭೀರ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ಆಗುತ್ತದೆ. ಸರ್ಕಾರಿ ಅಭಿಯೋಜಕರಾದ ಸವಿತಾ ಎಂ.ಶಿಗ್ಲಿ, ಮಲ್ಲಿಕಾರ್ಜುನಗೌಡ ಎಂ.ದೊಡ್ಡಗೌಡರ, ಅಂಬರೀಷ್ ಹಿರೇಮಠ ಅವರ ಪ್ರಾಮಾಣಿಕ ಸೇವೆಯಿಂದಾಗಿ ಅನೇಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಇಂತಹ ಶಿಕ್ಷೆಗಳು ಪ್ರಕಟವಾಗಿದೆ. ಅದಕ್ಕಾಗಿ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈ ಮೂವರು ಸರ್ಕಾರಿ ಅಭಿಯೋಜಕರನ್ನು ಗೌರವಿಸಲಾಗುತ್ತಿದೆ.

– ಬಿ.ಎಸ್. ನೇಮಗೌಡ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.


Spread the love

LEAVE A REPLY

Please enter your comment!
Please enter your name here