ವಿಜಯಸಾಕ್ಷಿ ಸುದ್ದಿ, ಗದಗ: ಧರ್ಮ ಸಂಸ್ಕಾರಯುತವಾದ ಬದುಕು ಆದರ್ಶಪ್ರಾಯವಾದದ್ದು. ನೈತಿಕ ಮೌಲ್ಯಗಳು ಮನುಷ್ಯನನ್ನು ಉನ್ನತಿಗೇರಿಸುತ್ತವೆ. ತಾಯಿಯ ಸಂಸ್ಕಾರದಿಂದ ನಮ್ಮಲ್ಲಿ ಮೌಲ್ಯಗಳು ರೂಢಿಯಾಗುತ್ತದೆ ಎಂದು ಅಡ್ನೂರ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಮಂಗಳವಾರ ಗದುಗಿನ ಜ. ಪಂಚಾಚಾರ್ಯ ವೇದ ಸಂಸ್ಕೃತ ಪಾಠ ಶಾಲೆಯಲ್ಲಿ ಜರುಗಿದ 184ನೇ ಮಾಸಿಕ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಾಮೃತ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸ್ತ್ರೀಯರು ಔದಾರ್ಯ ಹಾಗೂ ಸಹನೆಯ ಮೂರ್ತಿಯಾಗಿದ್ದಾರೆ. ಮುಖ್ಯವಾಗಿ ಮಕ್ಕಳು ಹಾಗೂ ಕುಟುಂಬದ ಜವಾಬ್ದಾರಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಮ್ಮ ತಾಯಂದಿರು ಇದ್ದಾರೆ ಎಂದರು.
ಗುರುರಕ್ಷೆಯನ್ನು ಪಡೆದ ಗಾಯಕಿ ಸಂಗೀತಾ ಭರಮಗೌಡರ ಮಾತನಾಡಿ, ಸಾಧನೆ ಮಾಡಲು ಸಹಕಾರ ಬೇಕು. ನನ್ನ ಸಾಧನೆಯ ಹಿಂದೆ ಕಾಣದ ಕೈಗಳು ಸಾಕಷ್ಟು ಸಹಕಾರ ನೀಡಿದ್ದು ನನ್ನ ಸಾಧನೆಗೆ ಪ್ರೇರಣೆ ಆಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನಾಮೃತ ಸಮಿತಿಯ ಗೌರವಾಧ್ಯಕ್ಷ ಎಲ್.ಪಿ. ಕಂಬಿ, ಜ್ಞಾನಾಮೃತ ಕಾರ್ಯಕ್ರಮವು ನಮ್ಮಲ್ಲಿ ಧಾರ್ಮಿಕ ಜಾಗೃತಿಯನ್ನುಂಟುಮಾಡುತ್ತದೆ. ಮಕ್ಕಳೊಂದಿಗೆ ಪಾಲಕರು ಇಲ್ಲಿ ಪಾಲ್ಗೊಳ್ಳುವದರಿಂದ ಉತ್ತಮ ಮೌಲ್ಯಗಳು ಮಕ್ಕಳಲ್ಲಿ ಬೆಳೆದು ಬರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಾಮೃತ ಸಮಿತಿಯ ಅಧ್ಯಕ್ಷ ಎಸ್.ಎಸ್. ಮೇಟಿ ಮಾತನಾಡಿ, ಶಿವಾನುಭವವು ನಮ್ಮಲ್ಲಿ ಅರಿವು ಆಚಾರಗಳನ್ನು ಮೂಡಿಸಿ ಬದುಕಿಗೆ ದಾರಿ ತೋರುತ್ತವೆ ಎಂದರು.
ವೇದಿಕೆಯ ಮೇಲೆ ನಾಗರತ್ನ ಹುಬ್ಬಳಿಮಠ ಹಾಗೂ ಪ್ರಸಾದ ಭಕ್ತಿ ಸೇವೆ ವಹಿಸಿದ್ದ ಶಿವಲಿಂಗಮ್ಮ ತಾವರಗೇರಿಮಠ ಉಪಸ್ಥಿತರಿದ್ದರು. ಪುಟ್ಟರಾಜ ಹಿರೇಮಠ ಹಾಗೂ ರೇವಣಯ್ಯ ಹಿರೇಮಠ ಪ್ರಾರ್ಥಿಸಿದರು. ಸಮಿತಿಯ ಕಾರ್ಯದರ್ಶಿ ಶರಣಪ್ಪ ಬಳಿಗೇರ ಸ್ವಾಗತಿಸಿದರು. ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಗುರುಸಿದ್ಧಯ್ಯ ಹಿರೇಮಠ ನಿರೂಪಿಸಿದರು. ವೀರಭದ್ರಯ್ಯ ಧನ್ನೂರಹಿರೇಮಠ ಪರಿಚಯಿಸಿದರು, ಶಶಿರೇಖಾ ಶಿಗ್ಲಿಮಠ ವಂದಿಸಿದರು.
ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸಮಿತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾವ್ಯಾ ದಂಡಿನ, ವ್ಹಿ.ಎಸ್. ಶಿವಕಾಳಿಮಠ, ಅನ್ನಪೂರ್ಣ ಮಾಳೇಕೊಪ್ಪಮಠ, ಆರ್.ಎಂ. ಹಿರೇಮಠ, ನಿರ್ಮಲಾ ಹುಬಳೀಮಠ, ಭಾಗ್ಯಶ್ರೀ ಕುರಡಗಿ, ರಾಜಶೇಖರ ಕಲ್ಮಠ, ಪ್ರಭಾವತಿ ದೊಡ್ಡಮನಿ, ರುದ್ರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಆಕಾಶ ಚೌಕಿಮಠ, ಶಶಿಧರ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಮಾತನಾಡಿ, ಹಿಡಿದ ಕೆಲಸ ಸಾಧಿಸುವಲ್ಲಿ ಮಹಿಳೆಯರು ಛಲಗಾರ್ತಿಯರು. ತಮ್ಮಲ್ಲಿರುವ ಕೀಳರಿಮೆ ತೊರೆದು ಎಡರು-ತೊಡರುಗಳನ್ನು ದಾಟಿ ಯಶಸ್ಸು ಸಾಧಿಸಬೇಕು. ಮುಖ್ಯವಾಗಿ ನಾವೆಲ್ಲರೂ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಮುಂದಾಗಬೇಕಿದೆ ಎಂದರು.