ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ನಿನ್ನೆಯಿಂದ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದೆ. ಮೊದಲ ದಿನ ವಾಹನ ಹೊರಗೆ ತಂದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಲಾಠಿ ಬಳಸದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಆದರೆ, ಅನಗತ್ಯವಾಗಿ ಹೊರ ಬಂದವರ ಬೈಕ್ ಸೀಜ್ ಆಗುವ ಭಯದಿಂದಾಗಿ ನಗರದಲ್ಲಿ ಜನ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಬೈಕ್ ಸೀಜ್ ಆಗುವ ಭಯದಲ್ಲಿ ಜನರು ಮನೆಯಿಂದ ಆಚೆ ಬಂದಿಲ್ಲ. ಸುಮ್ಮನೆ ಏಕೆ ಪೊಲೀಸರೊಂದಿಗೆ ಕಿರಿಕ್ ಎಂಬ ಉದ್ಧೇಶದಿಂದ ಜನರೇ ಮನೆಯಿಂದ ಆಚೆ ಬಂದಿಲ್ಲ. ಹೀಗಾಗಿ ವ್ಯಾಪಾರ- ವಹಿವಾಟು ಸರಿಯಾಗಿ ನಡೆದಿಲ್ಲ.

ಹೀಗಾಗಿ ನಗರದ ಪ್ರಮುಖ ಮಾರುಕಟ್ಟೆಗಳು ಬೀಕೋ ಎನ್ನುತ್ತಿವೆ. ವ್ಯಾಪಾರ ಆದರೆ ಹೂವು ಮಾರಾಟ ಮಾಡುತ್ತೇನೆ. ಇಲ್ಲವಾದರೆ ದೇವರಿಗೆ ಅರ್ಪಿಸಿ ಹೋಗುತ್ತೇನೆ ಎಂದು ಮಾರುಕಟ್ಟೆಗೆ ಹೂವು ತಂದಿದ್ದ ವ್ಯಾಪಾರಸ್ಥ ಅಳಲು ತೋಡಿಕೊಳ್ಳುತ್ತಿದ್ದ.

ವಾಲೇಶ್ ಪೂಜಾರ್ ಎಂಬ ವ್ಯಕ್ತಿ ಬೆಳಿಗ್ಗೆ 4ಕ್ಕೆ ಮಾರುಕಟ್ಟೆಗೆ ಹೂವು ತಂದಿದ್ದರು. ವಾಹನ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ಅವರು ಮಾರುಕಟ್ಟೆಗೆ ಹೂವು ತಂದಿದ್ದರು. ಆದರೆ, ಬೈಕ್ ಸೀಜ್ ಆಗುತ್ತದೆಂದು ಜನ ಮಾರುಕಟ್ಟೆಯತ್ತ ಬರಲಿಲ್ಲ. 2 ಸಾವಿರ ರೂ, ಕೊಟ್ಟು ಹೂವು ತಂದಿದ್ದೇನೆ. ಆದರೆ ವ್ಯಾಪಾರವಾಗುತ್ತಿಲ್ಲ ಎಂದು ವಾಲೇಶ್ ಕಣ್ಣೀರು ಸುರಿಸಿದ್ದಾರೆ. ಜನ ಬಾರದ ಕಾರಣ ಚಿಲ್ಲರೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ, ಚಿಲ್ಲರೇ ವ್ಯಾಪಾರಸ್ಥರ ಸಹಾಯಕ್ಕೆ ನಿಲ್ಲಬೇಕು ಎಂದು ಮನವಿ ಮಾಡುತ್ತಿದ್ದಾರೆ.