ವಿಜಯಸಾಕ್ಷಿ ಸುದ್ದಿ, ಧಾರವಾಡ: ವಿದ್ಯಾಕಾಶಿಯೆಂದೇ ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತವಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸಂಗೀತ, ಸಾಹಿತ್ಯ, ಕಲೆ, ಚಿತ್ರಕಲೆ, ರಂಗಭೂಮಿ ಕ್ಷೇತ್ರದಿಂದ ನೂರಾರು ಸಾಧಕರನ್ನು ಕಳುಹಿಸಿದ ಕೀರ್ತಿ ಗಳಿಸಿದ್ದ ಧಾರವಾಡ ಜಿಲ್ಲೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಶೈಕ್ಷಣಿಕ ಹಿನ್ನೆಡೆ ಆಗಿತ್ತು.
ಧಾರವಾಡ ಜಿಲ್ಲೆಗೆ ಶೈಕ್ಷಣಿಕವಾಗಿ ಐತಿಹಾಸಿಕ ವೈಭವವನ್ನು ಮರು ಸೃಷ್ಟಿಸಲು ಮತ್ತು ವಿದ್ಯಾಕಾಶಿ ಜೊತೆಗೆ ದಿವ್ಯಕಾಶಿ ಆಗಿಸಲು ಪಣತೊಟ್ಟ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಪ್ರಸಕ್ತ ವರ್ಷದ ಶೈಕ್ಷಣಿಕ ಆರಂಭದ ದಿನಗಳಲ್ಲಿಯೇ ಶೈಕ್ಷಣಿಕ ತಜ್ಞರೊಂದಿಗೆ, ಸಂವಹನ ತಜ್ಞರೊಂದಿಗೆ ಚರ್ಚಿಸಿ, ಮಿಷನ್ ವಿದ್ಯಾಕಾಶಿ ಯೋಜನೆಯನ್ನು ಹುಟ್ಟು ಹಾಕಿದರು.
ಶಿಕ್ಷಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಎಸ್.ಡಿ.ಎಂ.ಸಿ. ಸದಸ್ಯರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಜರುಗಿಸಿ, ಶೈಕ್ಷಣಿಕ ಸಾಧನೆಗೆ ಪ್ರೇರೇಪಿಸಿದರು. ಪ್ರತಿ ಹಂತದಲ್ಲೂ ಸ್ವತಃ ತಾವೇ ಭಾಗವಹಿಸಿ, ಎಲ್ಲರಲ್ಲೂ ಗುರಿ ಸಾಧನೆಯ ಭರವಸೆ ಮೂಡಿಸಿದರು.
ಅದರಂತೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1ರ ಎಲ್ಲ ಆರು ವಿಷಯಗಳ ಪರೀಕ್ಷೆಗಳು ಜಿಲ್ಲೆಯಾದ್ಯಂತ ಶಾಂತವಾಗಿ, ಪಾರದರ್ಶಕವಾಗಿ ಜರುಗಿದವು. ನಕಲು, ಡಿಬಾರದಂತ ಯಾವ ಕಪ್ಪು ಚುಕ್ಕೆಗಳಿಲ್ಲದೇ ಪರೀಕ್ಷೆಗಳು ಜರುಗಿದವು. ಪರೀಕ್ಷಾ ದಿನಗಳಂದು ಎಲ್ಲ ತಾಲೂಕುಗಳಿಗೂ ಸ್ವತಃ ಜಿಲ್ಲಾಧಿಕಾರಿಗಳೇ ಸಂಚರಿಸಿ, ಭೇಟಿ ನೀಡಿದರು. ಸರ್ವ ಸಾಮಾಜಿಕ ಸಮಸ್ಯೆಗಳಿಗೂ ಉತ್ತಮ ಶಿಕ್ಷಣವೇ ಮದ್ದು ಎಂದು ನಂಬಿರುವ ಜಿಲ್ಲಾಧಿಕಾರಿಗಳು ಎಡೆಬಿಡದೆ, ನಿರಂತರ ಶಾಲಾ ಭೇಟಿ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮತ್ತು ಸಾಧನಾ ಮೆಟ್ಟಿಲು ಎಂಬ ವಿಶೇಷ ಪುಸ್ತಕ ವಿತರಣೆ, ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಮಾಡುವ ಮೂಲಕ ಶಿಕ್ಷಣ ಇಲಾಖೆಗೆ ಹೊಸ ಭರವಸೆ, ಚೈತನ್ಯ ಮೂಡಿಸಿದರು.
ಪ್ರಸಕ್ತ ಸಾಲಿನ ಕೊನೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಾದ ಎ.4ರಂದು ಧಾರವಾಡ ತಾಲೂಕಿನ ಮುಗದ, ಅಳ್ನಾವರ ಪಟ್ಟಣದ ಮಿಲ್ಲತ್ ಉರ್ದು ಪ್ರೌಢಶಾಲೆ ಹಾಗೂ ಎನ್.ಇ.ಎಸ್ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಖುಷಿಯಿಂದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಭವಿಷ್ಯದ ಜೀವನ ಉತ್ತಮವಾಗಲಿ ಎಂದು ಶುಭ ಹಾರೈಸಿದರು.
ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಸ್.ಎಸ್.ಎಲ್.ಸಿ ಬೋರ್ಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕಡೆಯೂ ಸಿಸಿಟಿವಿ ಕಣ್ಗಾವಲುಗಳಿಂದ ಪರೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯತ ಸಿಇಓ ಕಚೇರಿಯಲ್ಲಿ ತಂಡಗಳನ್ನು ಮಾಡಿ, ಲೈವ ವೆಬ್‌ಕಾಸ್ಟಿಂಗ್ ಕೇಂದ್ರದಿಂದ ಪರೀಕ್ಷೆ ಸಮಯದಲ್ಲಿ ವೀಕ್ಷಣೆಯನ್ನು ಮಾಡಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯುವಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಈ ವರ್ಷ 28,666 ಜನ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ. ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗೈರು ಆದವರು ಸಂಖ್ಯೆ ತುಂಬಾ ಕಡಿಮೆ ಇದೆ. ನೊಂದಾಯಿತ ವಿದ್ಯಾರ್ಥಿಗಳ ಪೈಕಿ ಅಂದಾಜು ಶೇ 1.5ರಷ್ಟು ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಗೈರಾಗಿದ್ದಾರೆ. ಆದರೆ ಸರಿಸುಮಾರು ಶೇ. 98.27ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಉತ್ತಮವಾಗಿ ಎಲ್ಲ ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ಹತ್ತು ವರ್ಷಗಳಿಂದ ನಮ್ಮ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೆಳ ಸ್ಥಾನದಲ್ಲಿ ಇದೆ. ಅದಕ್ಕಾಗಿ ಟಾಪ್ 10 ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆಯನ್ನು ತೆಗೆದುಕೊಂಡು ಬರಬೇಕು ಎಂದು, ಎಲ್ಲ ಶಿಕ್ಷಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಎಲ್ಲರೂ ಈ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ. ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕು. ಏಕೆಂದರೆ ನಾವು ಮಾಡಿದ ಪರೀಕ್ಷೆಯಲ್ಲಿ ಟೆಸ್ಟ್ ಪರೀಕ್ಷೆಯಿಂದ ಹಿಡಿದು ಸುಮಾರು ವಿನೂತನ ವಿಷಯಗಳನ್ನು ಮಿಷನ್ ವಿದ್ಯಾಕಾಶಿಯಲ್ಲಿ ಮಾಡಲಾಗಿದೆ.
– ದಿವ್ಯ ಪ್ರಭು.
ಜಿಲ್ಲಾಧಿಕಾರಿಗಳು, ಧಾರವಾಡ.