ನವದೆಹಲಿ:- ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ ಬಳಿಕ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.
ಉಜ್ವಲ ಮತ್ತು ಉಜ್ವಲೇತರ ಗ್ರಾಹಕರಿಗೂ ಬೆಲೆ ಏರಿಕೆ ಅನ್ವಯವಾಗಲಿದೆ. ಆದ್ದರಿಂದ ಇನ್ಮುಂದೆ ಉಜ್ವಲ ಯೋಜನೆಯ 503 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್ಗೆ 553 ರೂ. ಹಾಗೂ ಇತರೇ ಗ್ರಾಹಕರು 803 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್ಗೆ 853 ರೂ. ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.
ಕಚ್ಚಾ ತೈಲ ದರ ಭಾರೀ ಇಳಿಕೆ:-
ಇನ್ನೂ ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.
ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್ (159 ಲೀಟರ್) ಬೆಲೆ ಸುಮಾರು 10 ಡಾಲರ್(ಅಂದಾಜು 850 ರೂ.) ಇಳಿಕೆಯಾಗಿದೆ.


