ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆಗೆ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲವು ಆರೋಪಿಗಳು ಹಾಜರಾಗಿದ್ದರು. ಆದರೆ ಬೆನ್ನು ನೋವಿನ ಕಾರಣದಿಂದ ನಟ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ವಿಚಾರಣೆ ಹಾಜರಾಗಬೇಕು’ ಎಂದಿದೆ.
ಡೆವಿನ್ ಸಿನಿಮಾದ ಶೂಟಿಂಗ್ ನಲ್ಲಿ ನಿರಂತರ ಭಾಗಿಯಾದ ಹಿನ್ನೆಲೆಯಲ್ಲಿ ದರ್ಶನ್ ಗೆ ಬೆನ್ನು ನೋವು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಇಂದು ನಡೆದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ವಿಷಯವನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು. ಆದರೆ ಸಮಜಾಯಿಷಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಮುಂದಿನ ವಿಚಾರಣೆ ಇದ್ದಾಗ ದರ್ಶನ್ ನ್ಯಾಯಾಲಯದ ಮುಂದೆ ಹಾಜರಾಗಲೇ ಬೇಕು ಎಂದು ತಿಳಿಸಿದ್ದಾರೆ.
ಇಂದು ನಡೆದ ವಿಚಾರಣೆಯಲ್ಲಿ ಪವಿತ್ರಾ ಗೌಡ, ನಂದಿಶ್, ಜಗದೀಶ್, ನಾಗರಾಜ್, ವಿನಯ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್ ಕೇಶವ ಮೂರ್ತಿ ಇನ್ನೂ ಕೆಲವರು ಹಾಜರಾಗಿದ್ದರು. ಕೆಲವು ಆರೋಪಿಗಳು, ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಬಳಿಕ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಯ್ತು.